ಮಂಗಳೂರು: ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ಹಾಗೂ ಕುಡಿಯುವ ನೀರು ಒದಗಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಜು.10ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿ/ಮ್ಯಾನುಯಲ್ ಸ್ಕ್ಯಾವೆಂಜರ್ ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾದ ಪುರಸಭೆ ಹಾಗೂ ಪಟ್ಟಣ ಪಂಚಾಯತ್‍ಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಸಮವಸ್ತ್ರ ಬದಲಾಯಿಸಲು, ಊಟ ಉಪಹಾರಕ್ಕೆ ಹಾಗೂ ವಿಶ್ರಾಂತಿಗಾಗಿ ಕೊಠಡಿ ಬೇಕು ಮುಖ್ಯವಾಗಿ ಅವರಿಗೆ ಕುಡಿಯುವ ನೀರು ಒದಗಿಸಬೇಕು ಇದಕ್ಕೆ ಶಾಶ್ವತವಾದ ವ್ಯವಸ್ಥೆಯನ್ನು ಮಾಡಬೇಕು, ಅದಕ್ಕೂ ಮುನ್ನ ತಾತ್ಕಾಲಿಕವಾಗಿ ಈ ವ್ಯವಸ್ಥೆ ಕಲ್ಪಿಸಿಕೊಡುವಂತೆ ಅವರು ಸೂಚಿಸಿದರು.
ಪೌರ ಕಾರ್ಮಿಕರು ತಮ್ಮ ಕೆಲಸ ಮಾಡುವ ಸ್ಥಳದಲ್ಲೇ ಕೊಂಡೊಯ್ಯುವಲು ಅನುಕೂಲವಾಗುವಂತ ಉತ್ತಮ ಪೌಚ್ ಮಾದರಿಯ ನೀರಿನ ಬಾಟಲ್ ಗಳನ್ನು ವ್ಯವಸ್ಥೆ ಮಾಡಿಕೊಡುವಂತೆ ಅವರು ತಿಳಿಸಿದರು.
ಪೌರಕಾರ್ಮಿಕರ ನೇಮಕಾತಿಗೆ ಸಂಬಂಧಿಸಿದ 371 ಹುದ್ದೆಗಳಿಗೆ 336 ಅರ್ಜಿಗಳು ಬಂದಿದೆ ಇದರಲ್ಲಿ 207 ಜನರ ನೇಮಕವಾಗಿದೆ. ಉಳಿದವು ಅರ್ನಹತೆಯ ಆಧಾರದಲ್ಲಿ ತಿರಸ್ಕøತಗೊಂಡಿವೆ ಎಂದು ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಬೀದ್ ಗಡ್ಯಾಳ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಯಾವ ಕಾರಣಕ್ಕೆ ಅರ್ಜಿಗಳು ತಿರಸ್ಕೃತಗೊಂಡಿವೆ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು.
ದಲಿತರಿಗೆ ಮೀಸಲಿಟ್ಟಿರುವ ಡಿಸಿ ಮನ್ನಾ ಭೂಮಿ ಕೆಲವೆಡೆ ಅತಿಕ್ರಮಣಕ್ಕೆ ಒಳಗಾಗುತ್ತಿದೆ ಎಂದು ದಲಿತ ಮುಖಂಡರು ಸಭೆಯ ಗಮನಕ್ಕೆ ತಂದಾಗ ಪ್ರತಿಕ್ರಿಸಿದ ಜಿಲ್ಲಾಧಿಕಾರಿಯವರು ಈ ಬಗ್ಗೆ ಕ್ರಮವಹಿಸಿ ಅಂತಹ ಭೂಮಿಗೆ ತಡೆಬೇಲಿ ಹಾಕಿ ಫಲಕ ಅಳವಡಿಸುವಂತೆ ನಿರ್ದೇಶನ ನೀಡಿದರು.
ಪೌರಕಾರ್ಮಿಕರು ನಿವೃತ್ತಿಯಾಗುವ ದಿನದಂದೇ ಅವರನ್ನು ಬೀಳ್ಕೊಡುವ ಸಮಾರಂಭದಲ್ಲಿ ಅವರಿಗೆ ಸಲ್ಲಬೇಕಾದ ನಿವೃತ್ತಿ ಮೊತ್ತದ ಚೆಕ್ಕನ್ನು ನೀಡಬೇಕು, ನಿವೃತ್ತಿ ವೇತನಕ್ಕಾಗಿ ಅವರು ಕಚೇರಿಗೆ ಅಲೆಯುವಂತಾಗಬಾರದು, ಅದಕ್ಕಾಗಿ ಮೂರು ತಿಂಗಳ ಮುನ್ನವೇ ಅಧಿಕಾರಿಗಳು ನಿವೃತ್ತಿ ದಾಖಲಾತಿಗಳನ್ನು ಸಿದ್ಧಪಡಿಸಿ ಖಜಾನೆಗೆ ಸಲ್ಲಿಸಬೇಕು. ಜಿಲ್ಲೆಯಲ್ಲಿ ಇದು ಶೇಕಡ ನೂರರಷ್ಟು ಅನುಷ್ಠಾನಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅನ್ಶು ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಾಲತಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.
ಜಿಲ್ಲಾ ಉಸ್ತುವಾರಿ ಮತ್ತು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ವಿಶ್ವನಾಥ್ ಬಂಟ್ವಾಳ್, ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.