Home ಟಾಪ್ ಸುದ್ದಿಗಳು ರೈತರ ವಿರುದ್ಧ ಹೇಳಿಕೆ ನೀಡಿರುವ ಅಧಿಕಪ್ರಸಂಗಿ ಸಚಿವೆಯ ವಿರುದ್ಧ ಕ್ರಮಕೈಗೊಳ್ಳಿ : ಸಿದ್ದರಾಮಯ್ಯ

ರೈತರ ವಿರುದ್ಧ ಹೇಳಿಕೆ ನೀಡಿರುವ ಅಧಿಕಪ್ರಸಂಗಿ ಸಚಿವೆಯ ವಿರುದ್ಧ ಕ್ರಮಕೈಗೊಳ್ಳಿ : ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಸರ್ಕಾರದ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು ‘ದಲ್ಲಾಳಿಗಳು’, ‘ಮಧ್ಯವರ್ತಿಗಳು’ ಎಂದು ಅವಮಾನಿಸಿರುವ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಖಂಡನೀಯ. ಅವರು ತಕ್ಷಣ ತಮ್ಮ ಹೇಳಿಕೆಯನ್ನು ವಾಪಸು ಪಡೆದು ರೈತರ ಕ್ಷಮೆ ಯಾಚಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.


ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರೈತ ಹೋರಾಟಗಾರರು ‘ದಲ್ಲಾಳಿಗಳು’, ‘ಮಧ್ಯವರ್ತಿಗಳು’ ಎಂಬ ಕೃಷಿ ಸಚಿವೆ ಶೋಭಾ ಹೇಳಿಕೆ ಬಿಜೆಪಿ ಸರ್ಕಾರದ ಅಧಿಕೃತ ನಿಲುವಾಗಿದ್ದರೆ ಪ್ರಧಾನಿ ಮೋದಿ ಒಪ್ಪಿಕೊಳ್ಳಬೇಕು, ಇಲ್ಲವಾದರೆ ಈ ಬಗ್ಗೆ ಸ್ಪಷ್ಟನೆ ನೀಡಿ ಅಧಿಕಪ್ರಸಂಗಿ ಸಚಿವೆಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


ಕರ್ನಾಟಕದಲ್ಲಿ ಪ್ರೊ.ಎಂ.ಡಿ.ನಂಜುಂಡ ಸ್ವಾಮಿಯವರಂತಹ ಹಿರಿಯರು ಮುನ್ನಡೆಸಿದ್ದ ರೈತ ಹೋರಾಟಕ್ಕೆ ಹೆಮ್ಮೆಯ ಪರಂಪರೆ ಇದೆ. ಇದೇನು ಅಧಿಕಾರಕ್ಕಾಗಿ, ಸಚಿವ ಸ್ಥಾನಕ್ಕಾಗಿ ನಡೆಸುವ ರಾಜಕೀಯ ದಲ್ಲಾಳಿಗಿರಿ ಹೋರಾಟ ಅಲ್ಲ ಎನ್ನುವುದನ್ನು ಶೋಭಾ ಅವರಂತಹವರು ತಿಳಿದುಕೊಳ್ಳುವುದು ಒಳಿತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Join Whatsapp
Exit mobile version