ಆರು ತಿಂಗಳ ಬಳಿಕ ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿದೆ ತಾಜ್ ಮಹಲ್

Prasthutha|

ಕೋವಿಡ್ ಕಾರಣದಿಂದ ಮುಚ್ಚಲಾಗಿದ್ದ ತಾಜ್ ಮಹಲ್ ಮತ್ತು ಆಗ್ರಾ ಕೋಟೆ ಮತ್ತೆ ಪ್ರವಾಸಿಗಳನ್ನು ಸ್ವಾಗತಿಸಲು ಸಜ್ಜಾಗಿದೆ. ತಾಜ್ ಮಹಲ್ ಮತ್ತು ಆಗ್ರಾ ಕೋಟೆ ಸೆಪ್ಟೆಂಬರ್ 21ರಂದು ತೆರೆಯಲಿದೆ. ಅನ್ ಲಾಕ್ 4ರ ಭಾಗವಾಗಿ ತಾಜ್ ಮಹಲ್ ಮತ್ತು ಆಗ್ರಾ ಕೋಟೆಯನ್ನು ತೆರೆಯಲಾಗುವುದು ಎಂದು ಸ್ಮಾರಕದ ಉಸ್ತುವಾರಿ ಪುರಾತತ್ವ ಶಾಸ್ತ್ರಜ್ಞ ಬಸಂತ್ ಕುಮಾರ್ ತಿಳಿಸಿದ್ದಾರೆ. ಭಾರತದ ಪ್ರಮುಖ ಪ್ರವಾಸಿ ತಾಣವಾದ ತಾಜ್ ಮಹಲನ್ನು ಮತ್ತೆ ತೆರೆಯುವುದರೊಂದಿಗೆ ಹೋಟೆಲ್ ಉದ್ಯಮವು ಪುನರುಜ್ಜೀವನಗೊಳ್ಳುವ ನಿರೀಕ್ಷೆಯಿದೆ. ಕೋವಿಡ್ ಕಾರಣದಿಂದ ತಾಜ್ ಮಹಲನ್ನು ಕಳೆದ ಮಾರ್ಚ್ ನಲ್ಲಿ ಮುಚ್ಚಲಾಗಿತ್ತು. ಇದರಿಂದಾಗಿ ಹೋಟೆಲ್ ಉದ್ಯಮವೂ ನಷ್ಟ ಅನುಭವಿಸಿತ್ತು.

ಲಾಕ್ ಡೌನ್ ಕಾರಣದಿಂದ ‘ಬಫರ್ ಝೋನ್’ ಭಾಗವಾಗಿ ಮುಚ್ಚಲ್ಪಟ್ಟ ನಗರದ ಎಲ್ಲಾ ಐತಿಹಾಸಿಕ ಸ್ಮಾರಕಗಳನ್ನು ಸೆಪ್ಟೆಂಬರ್ 1 ರಿಂದ ಪ್ರವಾಸಿಗರಿಗೆ ಮತ್ತೆ ತೆರೆಯಲಾಗುವುದು ಎಂದು ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಘೋಷಿಸಿದ್ದರು. ಆದರೆ ತಾಜ್ ಮಹಲ್ ಮತ್ತು ಆಗ್ರಾ ಕೋಟೆ ತೆರೆದಿರಲಿಲ್ಲ. ನಂತರ ಸೆಪ್ಟೆಂಬರ್ 21ರಂದು ತಾಜ್ ಮಹಲನ್ನು ಮತ್ತೆ ತೆರೆಯಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದರು. ತಾಜ್ ಮಹಲನ್ನು ತೆರೆಯುವುದರೊಂದಿಗೆ ಪ್ರವಾಸೋದ್ಯಮ ಕ್ಷೇತ್ರವನ್ನು ಉನ್ನತಿಗೇರಿಸಲು ಸಾಧ್ಯವಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಪ್ರವಾಸಿಗರನ್ನು ಸ್ವೀಕರಿಸಲು ನಾವು ಸಿದ್ದರಿದ್ದೇವೆ ಹೆಚ್ಚಿನ ಪ್ರವಾಸಿಗರು ಹರಿದು ಬರಲಿ ಎಂದು ಹೋಟೇಲ್ ಮಾಲಕಿ ರಶ್ಮಿ ಸಿಂಗ್ ಎಎನ್ಐ ಗೆ ತಿಳಿಸಿದ್ದಾರೆ.

- Advertisement -

ತಾಜ್ ಮಹಲ್ ದಿನಕ್ಕೆ 5,000 ಜನರಿಗೆ ಮತ್ತು ಆಗ್ರಾ ಕೋಟೆ ದಿನಕ್ಕೆ 2,500 ಜನರಿಗೆ ಮಾತ್ರ ಭೇಟಿ ನೀಡಲು ಅವಕಾಶವಿದೆ.  ಯಾವುದೇ ಟಿಕೆಟ್ ಕೌಂಟರ್ ಗಳು ಇರುವುದಿಲ್ಲ. ಬದಲಿಗೆ ಇಲಕ್ಟ್ರಿಕ್ ಟಿಕೆಟ್ ಸಂದರ್ಶಕರಿಗೆ ನೀಡಲಾಗುವುದು.

- Advertisement -