ಕೋವಿಡ್ ಕಾಲದಲ್ಲಿ ಮಾಧ್ಯಮ, ಪೊಲೀಸ್ ಮತ್ತು ತಬ್ಲೀಗ್ ಜಮಾಅತ್

Prasthutha|

-ಪ್ರೊ. ರಾಮ್ ಪುನಿಯಾನಿ

- Advertisement -

ಸ್ವಾರ್ಥ ಹಿತಾಸಕ್ತಿಯಲ್ಲಿ ಮುಳುಗಿದ್ದ ಕೇಂದ್ರದ ಬಿಜೆಪಿ ಸರಕಾರವು, ಪ್ರಾರಂಭದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿತ್ತು. ಆಡಳಿತ ವೈಫಲ್ಯಗಳನ್ನು ಮರೆಮಾಚಲು ಆಡಳಿತ ವರ್ಗ, ಪೊಲೀಸರು ಮತ್ತು ಮಾಧ್ಯಮಗಳು ಕೋವಿಡ್ ಹರಡುವಿಕೆಗೆ ತಬ್ಲೀಗ್ ಜಮಾಅತ್ ಅನ್ನು ಹೊಣೆಯಾಗಿಸಿದವು. ಆದರೆ ಬಾಂಬೆ ಹೈಕೋರ್ಟ್ ನ ತೀರ್ಪು ಮಾಧ್ಯಮ ಮತ್ತು ಪೊಲೀಸರನ್ನೇ ಕಟಕಟೆಯಲ್ಲಿ ತಂದು ನಿಲ್ಲಿಸಿತು.  ತಬ್ಲೀಗ್ ಜಮಾಅತನ್ನು ಹೇಗೆ ಬಲಿಪಶು ಮಾಡಲಾಯಿತು ಮತ್ತು ಹೈಕೋರ್ಟ್ ತೀರ್ಪು ಮಾಧ್ಯಮ ಅಪಪ್ರಚಾರವನ್ನು ಹೇಗೆ ಬಹಿರಂಗಪಡಿಸಿತು ಎಂಬುದರ ಕುರಿತು ಪ್ರೊ. ರಾಮ್ ಪುನಿಯಾನಿಯವರು ವಿಶ್ಲೇಷಣಾತ್ಮಕ ಲೇಖನ ಬರೆದಿದ್ದಾರೆ. ಮುಂದೆ ಓದಿ…

 ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಅಪಾಯಕಾರಿ ಗತಿಯಲ್ಲಿ ಹರಡುತ್ತಿದೆ. ದೇಶದ ಬಹುತೇಕ ಭಾಗಗಳಲ್ಲಿ ಇದರಿಂದ ಉಂಟಾಗುವ ಸಂಕಟಗಳು ಅಪಾರವಾಗಿದೆ. ಈ ವರ್ಷದ ಫೆಬ್ರವರಿಯ ಪ್ರಾರಂಭದಲ್ಲೇ ವಿಶ್ವ ಆರೋಗ್ಯ ಸಂಘಟನೆಯು ಜಗತ್ತಿನಾದ್ಯಂತವಿರುವ ಸರಕಾರಗಳಿಗೆ ರೋಗದಿಂದ ರಕ್ಷಣೆ ಹೊಂದಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿತ್ತು. ಆದರೆ ಆ ವೇಳೆ ಭಾರತ ಸರಕಾರವು ‘ನಮಸ್ತೆ ಟ್ರಂಪ್’ ಆಯೋಜನೆಯಲ್ಲಿ ನಿರತವಾಗಿತ್ತು. ಭಾರತಕ್ಕೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಸ್ವಾಗತಿಸುವ ದೊಡ್ಡ ಪ್ರದರ್ಶನ ನಡೆಸಿದ ಬಳಿಕ ಆಡಳಿತಾರೂಢ ಬಿಜೆಪಿಯು ಮಧ್ಯ ಪ್ರದೇಶ ಸರಕಾರವನ್ನು ಉರುಳಿಸಲು ಪ್ರಾರಂಭಿಸಲಾದ ‘ಆಪರೇಷನ್ ಕಮಲ’ವನ್ನು ಯಶಸ್ವಿಗೊಳಿಸುವಲ್ಲಿ ವ್ಯಸ್ಥವಾಗಿತ್ತು. ಈ ಕಾರಣದಿಂದಾಗಿ ಕೇಂದ್ರವು ತೀವ್ರ ವಿಳಂಬದ ಬಳಿಕ ಮಹಾಮಾರಿಯನ್ನು ಎದುರಿಸುವ ಸಿದ್ಧತೆಗಳನ್ನು ಪ್ರಾರಂಭಿಸಿತು.

- Advertisement -

 ನಂತರ ಮಾರ್ಚ್ 22ರಂದು ಜನತಾ ಕರ್ಫ್ಯೂ ಹಾಕಲಾಯಿತು ಮತ್ತು ಅದರ ಎರಡು ದಿನಗಳ ನಂತರ ದೇಶದಲ್ಲಿ ಸಂಪೂಣರ್ ಲಾಕ್‌ಡೌನ್ ಘೋಷಿಸಲಾಯಿತು. ಆ ನಂತರದಿಂದ ಸರಕಾರವು ಕೋವಿಡ್‌ಅನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿತು. ಅಮೂಲ್ಯ ಸಮಯವಿರುವಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳದ ತನ್ನ ಘೋರ ವೈಫಲ್ಯವನ್ನು ಮರೆಮಾಚಲು ಸರಕಾರವು ಅನುಕೂಲಕರ ಬೇಟೆಯ ತಲಾಶೆಯಲ್ಲಿತ್ತು ಹಾಗೂ ಆ ವೇಳೆ ತಬ್ಲೀಗ್ ಜಮಾಅತ್ ಉತ್ತಮ ಬೇಟೆಯಾಗಿ ದೊರಕಿತು. ತಬ್ಲೀಗ್ ಜಮಾಅತ್ ದಿಲ್ಲಿಯಲ್ಲಿ ನಿಝಾಮುದ್ದೀನ್ ಪ್ರದೇಶದಲ್ಲಿ ತನ್ನ ಮರ್ಕಝ್ ನಲ್ಲಿ ಅಥವಾ ಮುಖ್ಯ ಕಾರ್ಯಾಲಯದಲ್ಲಿ ಮಾರ್ಚ್ 13ರಿಂದ ಮಾರ್ಚ್ 15ರವರೆಗೆ 3 ದಿನಗಳ ಸಭೆಯನ್ನು ಆಯೋಜಿಸಿತ್ತು. ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಲು ಈ ಸಭೆಯು ಕಾರಣವಾಯಿತು ಎಂಬ ಸರಕಾರದ ಹೇಳಿಕೆಯನ್ನು ಮಾಧ್ಯಮವು ಕೈಗೆತ್ತಿಕೊಂಡಿತು. ಆ ಹೊತ್ತಿನಲ್ಲಿ ಈ ರೀತಿಯ ದೊಡ್ಡ ಆಯೋಜನೆ ಹಮ್ಮಿಕೊಳ್ಳುವುದು ಸೂಕ್ತವಲ್ಲ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿರುವಾಗ ಸಾವಿರಾರು ಮಂದಿ ಸೇರುವ ಸಭೆಯನ್ನು ಆಯೋಜಿಸಬಾರದಿತ್ತು. ಆದಾಗ್ಯೂ, ಈ ಸಭೆಯ ಆಯೋಜನೆ ಅಥವಾ ಸಂಘಟಿಸಿದ್ದ ವೇಳೆಯಲ್ಲಿ ಯಾವುದೇ ಲಾಕ್‌ಡೌನ್ ಇರಲಿಲ್ಲ ಮತ್ತು ಭಾರತದಿಂದ ಅಥವಾ ವಿದೇಶದಿಂದ ಮರ್ಕಝ್ ಗೆ ಜನರು ಆಗಮಿಸುವುದನ್ನು ತಡೆಯಲಾಗಿರಲಿಲ್ಲ ಎಂಬ ವಿಚಾರವನ್ನು  ತಬ್ಲೀಗ್ ಜಮಾಅತ್ ಟೀಕಾಕಾರರು ನಿರ್ಲಕ್ಷಿಸಿದ್ದರು.

 ಇದರ ಹೊರತಾಗಿ ಇನ್ನೂ ಅನೇಕ ಜನರು ನಮಸ್ತೆ ಟ್ರಂಪ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಫೆಬ್ರವರಿ 24 ಮತ್ತು 25ರಂದು ನಡೆದ ಸಮಾರಂಭದಲ್ಲಿ ಸುಮಾರು 2 ಲಕ್ಷ ಮಂದಿ ಪಾಲ್ಗೊಂಡಿದ್ದರು. ಕೇವಲ ರಾಜಕೀಯ ಸಮಾರಂಭಗಳಲ್ಲದೇ, ತಬ್ಲೀಗ್ ಜಮಾಅತ್ ಸಭೆಯ ಸಂದರ್ಭದಲ್ಲೂ ಮತ್ತು ಆ ನಂತರವೂ ಮಂದಿರ ಮತ್ತು ಮಠಗಳಲ್ಲೂ ಸಮಾವೇಶಗಳು ಸಾಮಾನ್ಯವಾಗಿ ನಡೆಯುತ್ತಿದ್ದವು. ತಬ್ಲೀಗ್ ಜಮಾಅತ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಗತ್ತಿನಾದ್ಯಂತ ಮಂದಿ ಆಗಮಿಸಿದ್ದರು ಮತ್ತು ಸಮಾವೇಶ ನಡೆಸಲು ಸರಕಾರದಿಂದ ಅವರಿಗೆ ಅನುಮತಿಯನ್ನು ನೀಡಲಾಗಿತ್ತು. ವಿದೇಶದಿಂದ ಬಂದ ಪ್ರತಿಯೊಬ್ಬರನ್ನು ವಿಮಾನ ನಿಲ್ದಾಣಗಳಲ್ಲಿ ಎಲ್ಲರಂತೆ ತಪಾಸಣೆ ನಡೆಸಲಾಗಿತ್ತು. ಲಾಕ್‌ಡೌನ್ ಘೋಷಣೆಯಾದ ಬಳಿಕ ತಬ್ಲೀಗ್ ಜಮಾಅತ್ ಅಧಿಕೃತರು ಮರ್ಕಝ್ ಅನ್ನು ಖಾಲಿ ಮಾಡಲು ಪ್ರಯತ್ನಿಸಿದರಾದರೂ, ಅಧಿಕಾರಿಗಳಿಂದ ಇದಕ್ಕೆ ಬಹಳ ಕಡಿಮೆ ಬೆಂಬಲ ದೊರಕಿತ್ತು. ಇಷ್ಟೆಲ್ಲಾ ನಡೆದಾಗಲೂ, ಕೋವಿಡ್-19 ಹರಡುವಿಕೆಯ ಆರೋಪವನ್ನು ಮೆಲ್ಲನೆ ಅವರ ಮೇಲೆ ಹೇರಲಾಯಿತು. ಈ ಘಟನೆಗಳ ಸರಣಿಯು ತಬ್ಲೀಗ್ ಜಮಾಅತ್ ಸುತ್ತಲಿನ ಮನೋಸ್ಥಿತಿ ಮತ್ತು ರಾಜಕೀಯ ಕುಶಲತೆಯನ್ನು ತೋರಿಸುತ್ತದೆ. ತಬ್ಲೀಗ್ ಜಮಾಅತ್‌ನ ರಾಕ್ಷಸೀಕರಣವು ಇಡೀ ಮುಸ್ಲಿಮ್ ಸಮುದಾಯವನ್ನು ಗುರಿಪಡಿಸಲು ಅನುಕೂಲಕರ ತಂತ್ರವಾಗಿ ಮಾರ್ಪಟ್ಟಿತು.  ಬಾಂಬೆ ಹೈಕೋರ್ಟ್‌ ನ  ಔರಂಗಾಬಾದ್ ಪೀಠವು ಇದೀಗ ತನ್ನ ತೀರ್ಪಿನಲ್ಲಿ, ತಬ್ಲೀಗಿಗಳ ವಿರುದ್ಧ ಕೈಗೊಳ್ಳಲಾದ ಕ್ರಮವು ಮಹಾಮಾರಿಯ ಹರಡುವಿಕೆಗೆ ಬಲಿಪಶುಗಳನ್ನು ಶೋಧಿಸುವ ಪ್ರಯತ್ನವಾಗಿತ್ತು ಎಂದು ಹೇಳಿದೆ.

 ಉನ್ಮಾದಕ್ಕೊಳಗಾಗಿದ್ದ ಕೋಮುವಾದಿ ಮಾಧ್ಯಮವು, ಪೂರ್ವಯೋಜಿತ ಷಡ್ಯಂತ್ರದ ಭಾಗವಾಗಿ ತಬ್ಲೀಗಿಗಳು ದೇಶದಲ್ಲಿ ಕೋವಿಡ್-19 ಅನ್ನು ಉದ್ದೇಶಪೂರ್ವವಾಗಿ ಹರಡಿದರು ಎಂದು ಪ್ರತಿಪಾದಿಸಿದರು. ಇದನ್ನು ಅವರು ‘ಕೊರೋನ ಜಿಹಾದ್’ ಎಂದು ಕರೆದರು ಮತ್ತು ಮರ್ಕಝ್ ನಲ್ಲಿ ಮುಸ್ಲಿಮರು ‘ಕೊರೋನ ಬಾಂಬ್’ ತಯಾರಿಯಲ್ಲಿದ್ದಾರೆ ಎಂದು ಹೇಳಲಾಯಿತು. ಈ ವಿಚಾರದ ಮತ್ತೊಂದು ಅಂಶವೆಂದರೆ, ಮರ್ಕಝ್ ಆ ಪ್ರದೇಶದ ಪೊಲೀಸ್ ಠಾಣೆಯಿಂದ ಹೆಚ್ಚು ಕಡಿಮೆ ನೂರು ಮೀಟರ್ ಅಂತರದಲ್ಲಿದೆ ಮತ್ತು ತಬ್ಲೀಗ್ ಜಮಾಅತ್ ಆಡಳಿತವು ಪೊಲೀಸರ ನಿರಂತರ ಸಂಪರ್ಕದಲ್ಲಿದೆ. ತಬ್ಲೀಗ್ ಜಮಾಅತ್ ಅಧಿಕೃತರ ಪ್ರಕಾರ, ಹಠಾತ್ ಲಾಕ್‌ಡೌನ್ ಘೋಷಣೆಯಿಂದಾಗಿ ಅದರ ಸದಸ್ಯರಿಗೆ ನಿಝಾಮುದ್ದೀನ್‌ನಿಂದ ಹೊರಗೆ ಪ್ರಯಾಣಿಸಲು ಅನನುಕೂಲವಾಯಿತು ಮತ್ತು ಈ ಕಾರಣದಿಂದಾಗಿ ಅವರು ಅಲ್ಲಿ ಸಿಲುಕಿಕೊಂಡರು.

 ಇದಕ್ಕಿಂತಲೂ ಅಧಿಕ ಅಚ್ಚರಿದಾಯಕ ಸಂಗತಿ, ಮುಖ್ಯವಾಹಿನಿ ಮಾಧ್ಯಮಗಳು ವಿಶೇಷವಾಗಿ ಟಿವಿ ಚಾನೆಲ್‌ಗಳು ತಬ್ಲೀಗ್ ಜಮಾಅತ್ ಕುರಿತು ನಕಾರಾತ್ಮಕ ಚಿತ್ರಣವನ್ನು ಕೂಡಲೇ ಹೇಗೆ ವ್ಯಾಪಕವಾಗಿ ಹರಡಿದವು ಎಂಬುವುದಾಗಿದೆ. ಮುಸ್ಲಿಮರು ಕೋವಿಡ್-19 ಹರಡುತ್ತಿದ್ದರು ಎಂಬ ಕಲ್ಪನೆಯು ಸಾಮಾನ್ಯ ಸಾಮಾಜಿಕ ಪ್ರಜ್ಞೆಯ ಭಾಗವಾಗಿಬಿಟ್ಟಿತು. ಭಾರತದ ಸಾಮಾಜಿಕ ಜೀವನದ ಮೇಲೆ ಇದರ ಪರಿಣಾಮವು ತಕ್ಷಣದ ಮತ್ತು ನಕಾರಾತ್ಮಕವಾಗಿತ್ತು. ಹಲವು ಕಡೆಗಳಲ್ಲಿ ಬೀದಿಬದಿ ತರಕಾರಿ ಮಾರುತ್ತಿದ್ದ ಬಡ ಮುಸ್ಲಿಮರಿಗೆ ಥಳಿಸಲಾಯಿತು ಮತ್ತು ಹಲವು ವಸತಿ ಕಾಲೊನಿಗಳು ಅವರಿಗೆ ಪ್ರವೇಶವನ್ನು ನಿರಾಕರಿಸಿದವು. ಗ್ರಾಮೀಣ ಪ್ರದೇಶಗಳಲ್ಲಿ ಮುಸ್ಲಿಮರ ಮೇಲೆ ದಾಳಿಗಳು ನಡೆದವು ಮತ್ತು ಹಲವು ಆಸ್ಪತ್ರೆಗಳು ಮುಸ್ಲಿಮರಿಗೆ ಉಪಚಾರ ನೀಡುವುದನ್ನು ನಿರಾಕರಿಸಿದ ಆರೋಪಗಳೂ ಕೇಳಿಬಂದವು. ಕೆಲವು ತಬ್ಲೀಗ್ ಸದಸ್ಯರನ್ನು ಕ್ವಾರಂಟೈನ್‌ಗೆ ಅಥವಾ ಆಸ್ಪತ್ರೆಗೆ ದಾಖಲಿಸಿದ ಬಳಿಕ ಸುಳ್ಳು ಸುದ್ದಿ ನಿರ್ಮಾಪಕರು ರಂಗಕ್ಕೆ ಧುಮುಕಿದರು. ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ತಬ್ಲೀಗಿಗಳು ನರ್ಸ್‌ಗಳಿಗೆ ಅಶ್ಲೀಲ ಸನ್ನೆಯನ್ನು ಮಾಡುವುದು, ಅಧಿಕಾರಿಗಳ ಮೇಲೆ ಉಗುಳುವುದು, ವಾರ್ಡ್‌ಗಳಲ್ಲಿ ಬೆತ್ತಲೆಯಾಗಿ ತಿರುಗಾಡುವುದು ಮೊದಲಾದವುಗಳನ್ನು ಮಾಡುತ್ತಿದ್ದಾರೆ ಎಂಬ ವದಂತಿಗಳು ಸುತ್ತಲೂ ಹರಡಲು ಪ್ರಾರಂಭವಾದವು. ಇದರಿಂದಾಗಿ ಮೊದಲೇ ಇದ್ದ ಇಸ್ಲಾಮೋಫೋಬಿಯಾವು ಈ ದಿನಗಳಲ್ಲಿ ಮತ್ತಷ್ಟು ಹೆಚ್ಚು ಹರಡಿತು. ವಿಶೇಷವಾಗಿ, ವಿದೇಶದಿಂದ ಆಗಮಿಸಿದ್ದ ತಬ್ಲೀಗ್ ಜಮಾಅತ್ ಸದಸ್ಯರ ವಿರುದ್ಧ ಪೊಲೀಸರು ವಿಳಂಬಿಸದೆ ಪ್ರಕರಣಗಳನ್ನು ದಾಖಲಿಸಿದರು. ಅವರ ಮೇಲೆ ವೀಸಾ ನಿಯಮಗಳ ಉಲ್ಲಂಘನೆ, ಮಹಾಮಾರಿ ಹರಡುವಿಕೆ ಮತ್ತು ಇಸ್ಲಾಮಿನ ಪ್ರಚಾರಕ್ಕೆ ಸಂಬಂಧಿಸಿ ಹಲವು ಕಲಂಗಳಡಿಯಲ್ಲಿ ಪ್ರಕರಣ ದಾಖಲಾಯಿತು.

 ಇದಕ್ಕೆ ವ್ಯತಿರಿಕ್ತವಾಗಿ, ಈ ಪ್ರಕರಣಗಳಿಗೆ ಸಂಬಂಧಿಸಿದ ನ್ಯಾಯಾಲಯಗಳ ತೀರ್ಪುಗಳು ಮಾಧ್ಯಮ ಮತ್ತು ಪೊಲೀಸರನ್ನೇ ಕಟಕಟೆಯಲ್ಲಿ ತಂದು ನಿಲ್ಲಿಸಿದವು. ಎಫ್‌ಐಆರ್‌ನಲ್ಲಿ ಒಳಗೊಂಡಿದ್ದ ನಿರ್ಲಜ್ಜ ಸುಳ್ಳುಗಳು ಮತ್ತು ಮಾಧ್ಯಮದ ಅಪಪ್ರಚಾರವು ಇದೀಗ ಬಹಿರಂಗಗೊಂಡಿದೆ. ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ಪೀಠವು, ‘‘ಯಾವುದೇ ಮಹಾಮಾರಿ ಹರಡುವಾಗ ಅಥವಾ ಯಾವುದೇ ವಿಪತ್ತು ಸಂಭವಿಸುವಾಗಲೆಲ್ಲಾ ರಾಜಕೀಯ ಸರಕಾರಗಳು ಬಲಿಪಶುವನ್ನು ಹುಡುಕಲು ಪ್ರಾರಂಭಿಸುತ್ತವೆ. ಈ ಪ್ರಕರಣದಲ್ಲಿ ಪರಿಸ್ಥಿತಿಗಳನ್ನು ಗಮನಿಸುವಾಗ, ತಬ್ಲೀಗಿಗಳನ್ನು ಬಲಿಪಶುಗಳನ್ನಾಗಿ ಮಾಡಲು ಆಯ್ಕೆ ಮಾಡಲಾಯಿತು ಎಂದು ಅನಿಸುತ್ತದೆ. ಆಗಿನ ಸನ್ನಿವೇಶ ಮತ್ತು ಭಾರತದಲ್ಲಿನ ಪ್ರಸಕ್ತ ಸೋಂಕಿನ ಅಂಕಿಅಂಶಗಳು ಅರ್ಜಿದಾರರ ವಿರುದ್ಧ ಈ ರೀತಿಯ ಕ್ರಮಗಳನ್ನು ಕೈಗೊಳ್ಳಬಾರದಿತ್ತು ಅನ್ನುವುದನ್ನು ತೋರಿಸುತ್ತದೆ’’ ಎಂಬುದಾಗಿ ಗಮನಿಸಿದೆ. ಮಾಧ್ಯಮವನ್ನು ಟೀಕಿಸುತ್ತಾ ಕೋರ್ಟ್, ದಿಲ್ಲಿಯ ಮರ್ಕಝ್ ಗೆ ಬಂದ ವಿದೇಶಿಗರ ವಿರುದ್ಧ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ದೊಡ್ಡಮಟ್ಟದ ಅಪಪ್ರಚಾರವನ್ನು ನಡೆಸಲಾಯಿತು ಮತ್ತು ಭಾರತದಲ್ಲಿ ಕೋವಿಡ್-19 ಹರಡಲು ಈ ವಿದೇಶಿಗರೇ ಹೊಣೆಯಾಗಿದ್ದಾರೆ ಎಂಬ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನಗಳನ್ನು ನಡೆಸಲಾಯಿತು. ಈ ಮೂಲಕ ಅವರಿಗೆ ಮಾನಸಿಕ ಕಿರುಕುಳವನ್ನು ನೀಡಲಾಯಿತು ಎಂದು ಹೇಳಿದೆ.

 ಈ ತೀರ್ಪು ಧಾರ್ಮಿಕ ಅಲ್ಪಸಂಖ್ಯಾತರ ಕುರಿತಂತೆ ಇರುವ ಆಡಳಿತದ ವಿಶೇಷವಾಗಿ, ಪೊಲೀಸರು ಮತ್ತು ಮಾಧ್ಯಮಗಳ ಧೋರಣೆಯ ವಿಚಾರದ ಅಧ್ಯಯನವಾಗಿದೆ. ಸಮಾವೇಶದಲ್ಲಿ ಭಾಗವಹಿಸಲು ಅಥವಾ ಪ್ರವಾಸಕ್ಕಾಗಿ ವಿದೇಶದಿಂದ ಭಾರತಕ್ಕೆ ಆಗಮಿಸಿದ ಮುಸ್ಲಿಮರನ್ನು ವಿನಾಕಾರಣ ತೊಂದರೆಗೊಳಪಡಿಸಿ, ಕಿರುಕುಳ ನೀಡಲಾಯಿತು. ‘‘ಈ ಕ್ರಮವು ಮುಸ್ಲಿಮರ ವಿರುದ್ಧ ಯಾವುದೇ ರೀತಿಯಲ್ಲೂ ಮತ್ತು ಯಾತಕ್ಕಾದರೂ ಕ್ರಮಕೈಗೊಳ್ಳಬಹುದಾಗಿದೆ ಎಂದು ಭಾರತೀಯ ಮುಸ್ಲಿಮರಿಗೆ ನೀಡಿದ ಪರೋಕ್ಷಎಚ್ಚರಿಕೆಯಾಗಿದೆ. ಇತರ ದೇಶಗಳ ಮುಸ್ಲಿಮರೊಂದಿಗೆ ಸಂಪರ್ಕ ಹೊಂದಿದ ಕಾರಣಕ್ಕಾಗಿಯೂ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂಬ ಸೂಚನೆಯನ್ನೂ ನೀಡಲಾಗಿತ್ತು. ಈ ರೀತಿ ಈ ವಿದೇಶಿಗರು ಮತ್ತು ಮುಸ್ಲಿಮರ ವಿರುದ್ಧ ಅವರ ಆರೋಪಿತ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವುದರಲ್ಲಿ ಹಗೆತನದ ದುಗರ್ಂಧವಿದೆ’’ ಎಂಬುವುದಾಗಿಯೂ ಕೋರ್ಟ್ ಹೇಳಿದೆ.

 ಪ್ರಾಸಂಗಿಕವಾಗಿ, ಕೋವಿಡ್-19 ಸಾಂಕ್ರಾಮಿಕ ರೋಗವು, ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾದ ಜವಾಬ್ದಾರಿ ಹೊಂದಿರುವವರು ಸಂಪೂರ್ಣವಾಗಿ ಪಕ್ಷಪಾತಿಯಾಗಿದ್ದಾರೆ ಮತ್ತು ಮುಸ್ಲಿಮರ ನಡುವೆ ಬಲಿಪಶುಗಳನ್ನು ಹುಡುಕುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮಾರ್ಚ್, ಎಪ್ರಿಲ್‌ನಲ್ಲಿ ನಡೆದ ಘಟನೆಗಳು ಸಮಾಜದ ಕೆಲವು ವರ್ಗಗಳನ್ನು ಯಾವ ರೀತಿಯಲ್ಲಿ ಪವಿತ್ರ ಹಸುಗಳಂತೆ ಕಾಪಾಡಲಾಗುತ್ತದೆ ಎಂಬುದನ್ನು ಪ್ರದರ್ಶಿಸುತ್ತದೆ. ಉದಾಹರಣೆಗೆ, ಕಳೆದ ಫೆಬ್ರವರಿಯಲ್ಲಿ ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿತರಾದ ಹಲವರು ಸರಕಾರದ ಸಿಎಎ-ಎನ್‌ಆರ್‌ಸಿ ಯೋಜನೆಯ ವಿರುದ್ಧ ಸಕ್ರಿಯವಾಗಿ ಪ್ರತಿಭಟಿಸಿದವರಾಗಿದ್ದಾರೆ. ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ ಆಡಳಿತಾರೂಢ ಪಕ್ಷದ ಸಂಸದರಾದ ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ, ಮತ್ತು ಬಿಜೆಪಿ ನಾಯಕ ಕಪಿಲ್ ಮಿಶ್ರಾರಂತವರು ತಮ್ಮ ವ್ಯವಹಾರಕ್ಕಾಗಿ ಮುಕ್ತವಾಗಿ ತಿರುಗಾಡುತ್ತಿರುವಾಗ, ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸಿದವರು ನಿಗಾವಣೆಯಲ್ಲಿದ್ದಾರೆ.

ಇದೇ ರೀತಿಯ ಧೋರಣೆಯು 2006-2008ರ ನಡುವೆ ದೇಶದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿಯೂ ಕಂಡು ಬಂದಿತ್ತು. ಈ ಅಂಶವನ್ನು ಸ್ಪಷ್ಟಪಡಿಸಲು ಕೆಲವೇ ಉದಾಹರಣೆಗಳು ಸಾಕು. 2007ರಲ್ಲಿ ನಡೆದ ಹೈದರಾಬಾದ್‌ನ ಮಕ್ಕಾ ಮಸ್ಜಿದ್ ಸ್ಫೋಟದ ನಂತರ ದೊಡ್ಡ ಸಂಖ್ಯೆಯ ಮುಸ್ಲಿಮ್ ಯುವಕರನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ನಂತರ ವಿವಿಧ ನ್ಯಾಯಾಲಯಗಳು ಸಾಕ್ಷ್ಯಾಧಾರದ ಕೊರತೆಯಿಂದ ಅವರನ್ನು ಬಿಡುಗಡೆಗೊಳಿಸಿತ್ತು. ಆದರೆ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಠಾಕೂರ್ ಕೇವಲ ಜಾಮೀನಿನ ಮೇಲೆ ಬಿಡುಗಡೆಗೊಂಡದ್ದು ಮಾತ್ರವಲ್ಲ, ಸಂಸದೆಯಾಗಿಯೂ ಆಯ್ಕೆಯಾದಳು. ಇದರಿಂದ ನಾವು, ದೇಶದಲ್ಲಿ ಕೆಲವು ಮಂದಿ ತಮ್ಮ ಧಾರ್ಮಿಕ ಅಸ್ಮಿತೆಗಾಗಿ ಗುರಿಯಾಗಿದ್ದಾರೆ ಮತ್ತು ಇತರರು ಸಮಾನ ಕಾರಣಕ್ಕಾಗಿ ನಿರ್ದೋಷಿಗಳಾಗಿ ಬಿಟ್ಟಿದ್ದಾರೆ ಎಂಬ ಪಾಠವನ್ನು ಕಲಿಯಬಹುದಾಗಿದೆ. ತಬ್ಲೀಗ್ ಜಮಾಅತ್ ಪ್ರಕರಣದಲ್ಲಿ ಇತ್ತೀಚಿನ ಕೋರ್ಟ್ ತೀರ್ಪು ಈ ಅಂಶಗಳನ್ನು ಬೊಟ್ಟು ಮಾಡುತ್ತದೆ.

Join Whatsapp