ಟಿ20| ದಕ್ಷಿಣ ಅಫ್ರಿಕಾ ವಿರುದ್ಧ ಭಾರತಕ್ಕೆ 8 ವಿಕೆಟ್‌ ಜಯ

Prasthutha|

​​​​​​​ತಿರುವನಂತಪುರಂ: ದಕ್ಷಿಣ ಅಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್ ಅಂತರದಲ್ಲಿ ಭರ್ಜರಿ  ಗೆಲುವು ದಾಖಲಿಸಿದೆ.

- Advertisement -

ತಿರುವನಂತಪುರಂನ ಗ್ರೀನ್‌ ಫೀಲ್ಡ್‌ ಸ್ಟೇಡಿಯಂನಲ್ಲಿ ಪ್ರವಾಸಿ ಆಫ್ರಿಕಾ ನೀಡಿದ್ದ 107 ರನ್‌ಗಳ ಗುರಿಯನ್ನು ರೋಹಿತ್‌ ಪಡೆ 16.4 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟದಲ್ಲಿ ಚೇಸ್‌ ಮಾಡಿತು. ಭಾರತದ ಪರ ಆರಂಭಿಕ ಕೆ.ಎಲ್‌. ರಾಹುಲ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅರ್ಧಶತಕ ಗಳಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನತ್ತ ಮುನ್ನಡೆಸಿದರು.  

ರಾಹುಲ್‌ 51 ರನ್‌ ಗಳಿಸಿದರೆ ( 56 ಎಸೆತ, 4×2, 6×4 ) ಸೂರ್ಯಕುಮಾರ್‌ 33 ಎಸೆತಗಳಲ್ಲಿ 3 ಸಿಕ್ಸರ್‌ ಮತ್ತು 5 ಬೌಂಡರಿಯ ನೆರವಿನಿಂದ 50 ರನ್‌ ಗಳಿಸಿ ಅಜೇಯರಾಗುಳಿದರು. ರಾಹುಲ್‌ ಜೊತೆ ಇನ್ನಿಂಗ್ಸ್‌ ಆರಂಭಿಸಿದ್ದ ರೋಹಿತ್‌ ಶೂನ್ಯಕ್ಕೆ ನಿರ್ಗಮಿಸಿದರೆ, ವಿರಾಟ್‌ ಕೊಹ್ಲಿ ಕೇವಲ 3ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು.

- Advertisement -

ದಕ್ಷಿಣ ಆಫ್ರಿಕಾ 107/8

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ್ದ ಪ್ರವಾಸಿ ಹರಿಣ ಪಡೆ, ನಿಗಧಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟದಲ್ಲಿ 106 ರನ್‌ಗಳಿಸಿತ್ತು. ಒಂದು ಹಂತದಲ್ಲಿ 2.3 ಓವರ್‌ಗಳಲ್ಲಿ 9 ರನ್‌ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಇನ್ನೇನು ಅಲ್ಪಮೊತ್ತಕ್ಕೆ ಇನ್ನಿಂಗ್ಸ್‌ ಮುಗಿಸುವ ಸೂಚನೆ ನೀಡಿತ್ತಾದರೂ ಬಳಿಕ ಚೇತರಿಕೆಯ ಆಟವಾಡಿತು.

ಭಾರತದ ಪರ ಬೌಲಿಂಗ್‌ ದಾಳಿ ಆರಂಭಿಸಿದ್ದ ದೀಪಕ್‌ ಚಹಾರ್‌ ಮತ್ತು ಅರ್ಷ್‌ದೀಪ್‌ ಸಿಂಗ್‌, ತಮಗೆ ದೊರೆಕಿದ ಅವಕಾಶವನ್ನು ಅತ್ಯುತ್ತಮವಾಗಿಯೇ ಬಳಸಿಕೊಂಡರು. ಅರ್ಷ್‌ದೀಪ್‌ ತಾವು ಎಸೆದ ಮೊದಲ ಓವರ್‌ನಲ್ಲೇ (ಇನ್ನಿಂಗ್ಸ್‌ನ ಎರಡನೇ ಓವರ್‌) ಮೂರು ವಿಕೆಟ್‌ ಪಡೆಯುವ ಮೂಲಕ ಆರಂಭದಲ್ಲೇ ಆಫ್ರಿಕಾಗೆ ಆಘಾತವಿಕ್ಕಿದರು.  ದೀಪಕ್‌ ಚಾಹರ್‌ ಮೊದಲನೇ ಮತ್ತು ಎರಡನೇ ಓವರ್‌ನಲ್ಲಿ ತಲಾ ಒಂದು ವಿಕೆಟ್‌ ಪಡೆದರು. ಆ ಮೂಲಕ ತೆಂಬಾ ಬವುಮಾ ಪಡೆ 2.3 ಓವರ್‌ಗಳಲ್ಲಿ 9 ರನ್‌ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ಆ ಬಳಿಕ ಏಡೆನ್‌ ಮಾರ್ಕಮ್‌ (25 ರನ್‌), ಬೌಲರ್‌ಗಳಾದ ವೇಯ್ನ್‌ ಪಾರ್ನೆಲ್‌ 24 ರನ್‌ ಹಾಗೂ ಕೇಶವ್‌ ಮಹಾರಾಜ್‌41 ರನ್‌ಗಳಿಸಿ ತಂಡವು ಮೂರಂಕಿಯ ಮೊತ್ತವನ್ನು ದಾಟುವಲ್ಲಿ ಜೊತೆಗೂಡಿದರು. ಅರ್ಷದೀಪ್‌ ಸಿಂಗ್‌ 3 ವಿಕೆಟ್‌, ದೀಪಕ್‌ ಚಹಾರ್‌ ಮತ್ತು ಹರ್ಷಲ್‌ ಪಟೇಲ್‌ ತಲಾ 2 ವಿಕೆಟ್‌ ಪಡೆದರು. ಅಕ್ಷರ್‌ ಪಟೇಲ್‌ 1 ವಿಕೆಟ್‌ ಪಡೆದರು.

Join Whatsapp