ಸಿಡ್ನಿ: ಟಿ20 ವಿಶ್ವಕಪ್ 2022ರ ಚಾಂಪಿಯನ್ ಯಾರಾಗಲಿದ್ದಾರೆ ಎಂಬ ಕ್ರಿಕೆಟ್ ಪ್ರೇಮಿಗಳ ಕೂತೂಹಲಕ್ಕೆ ಭಾನುವಾರ ಮೆಲ್ಬರ್ನ್‌ನಲ್ಲಿ ತೆರೆಬೀಳಲಿದೆ. ಜಾಸ್ ಬಟ್ಲರ್ ಸಾರಥ್ಯದ ಇಂಗ್ಲೆಂಡ್ ಮತ್ತು ಬಾಬಾರ್ ಅಝಂ ನಾಯಕನಾಗಿರುವ ಪಾಕಿಸ್ತಾನ ತಂಡಗಳು ಚುಟುಕು ಕ್ರಿಕೆಟ್‌ನ ಚಾಂಪಿಯನ್ ಪಟ್ಟದ ಅಂತಿಮ ಹಣಾಹಣಿಗೆ ಸಜ್ಜಾಗಿವೆ.
ಮೆಲ್ಬರ್ನ್‌ನ ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ನಲ್ಲಿ ನಡೆಯಲಿರುವ ಪಂದ್ಯದತ್ತ ಕ್ರಿಕೆಟ್ ಲೋಕದ ಕುತೂಹಲದ ದೃಷ್ಟಿ ನೆಟ್ಟಿದೆ. ಆದರೆ ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ. ಮೆಲ್ಬರ್ನ್‌ನಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಸ್ಥಳೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಭಾನುವಾರವೂ ಮಳೆ ಮುಂದುವರಿಯುವ ಸೂಚನೆ ನೀಡಿದೆ.
ಭಾನುವಾರ, ಸ್ಥಳೀಯ ಕಾಲಮಾನ ರಾತ್ರಿ 7 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ1.30) ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಮೀಸಲು ದಿನ ಸೋಮವಾರಕ್ಕೆ ಪಂದ್ಯವನ್ನು ಮುಂದೂಡಲಾಗುತ್ತದೆ. ಹವಾಮಾನ ಅನುಕೂಲಕರವಾಗಿದ್ದರೆ ಸೋಮವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 3ಗಂಟೆಗೆ (ಭಾರತೀಯ ಕಾಲಮಾನ ಬೆಳಗ್ಗೆ 9.30) ಪಂದ್ಯ ಆರಂಭವಾಗಲಿದೆ. ಸೋಮವಾರದ ಪಂದ್ಯಕ್ಕೆ ಹೆಚ್ಚುವರಿಯಾಗಿ ಎರಡು ಗಂಟೆ ಸಮಯವನ್ನೂ ನೀಡಲಾಗಿದೆ.
ಆದರೆ ಹವಾಮಾನ ಇಲಾಖೆಯ ಮುಖ್ಯಸ್ಥ ಆಂಡ್ರ್ಯೂ ವಾಟ್ಕಿನ್ಸ್, ನೀಡಿರುವ ಮುನ್ಸೂಚನೆಯ ಪ್ರಕಾರ ಸೋಮವಾರವೂ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಫೈನಲ್ ಪಂದ್ಯದಲ್ಲಿ ಫಲಿತಾಂಶ ಕಾಣಲು ಎರಡೂ ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ ಹತ್ತು ಓವರ್‌ಗಳ ಆಟ ನಡೆಯಲೇಬೇಕು ಎಂದು ಐಸಿಸಿ ಈಗಾಗಲೇ ನಿಯಮದಲ್ಲಿ ಬದಲಾವಣೆ ಮಾಡಿದೆ.
ಸೋಮವಾರವೂ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಉಭಯ ತಂಡಗಳನ್ನು ʻಜಂಟಿ ವಿಜೇತʼರೆಂದು ಘೋಷಿಸಲಾಗುತ್ತದೆ. 2002ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಭಾರತ ಮತ್ತು ಶ್ರೀಲಂಕಾ ನಡುವಿನ ಫೈನಲ್ ಪಂದ್ಯವು ಮೀಸಲು ದಿನಕ್ಕೆ ಮುಂದೂಡಲ್ಪಟ್ಟಿತ್ತಾದರೂ ಪಂದ್ಯ ನಡೆಸಲು ಸಾಧ್ಯವಾಗಿರಲಿಲ್ಲ . ಹೀಗಾಗಿ ಉಭಯ ತಂಡಗಳನ್ನು ಜಂಟಿ ವಿಜೇತರಾಗಿ ಘೋಷಿಸಲಾಗಿತ್ತು.