► 30 ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್- ಪಾಕಿಸ್ತಾನ ಮುಖಾಮುಖಿ !
ಮೆಲ್ಬರ್ನ್: ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿ ಉಪಾಂತ್ಯ ಹಂತ ತಲುಪಿದೆ. ಇದೀಗ ನಡೆಯುತ್ತಿರುವ ಫೈನಲ್ ಫೈಟ್‌ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಪಾಕಿಸ್ತಾನ- ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ಫೈನಲ್ ಪಂದ್ಯದ ಟಾಸ್ ಗೆದ್ದ ಇಂಗ್ಲೆಂಡ್, ಪಾಕಿಸ್ತಾನ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ. ಸೆಮಿಫೈನಲ್‌ನಲ್ಲಿ ಆಡಿದ್ದ ಹನ್ನೊಂದರ ಬಳಗವನ್ನೇ ಎರಡೂ ತಂಡಗಳು ಫೈನಲ್‌ನಲ್ಲೂ ಉಳಿಸಿಕೊಂಡಿವೆ.
1992ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಇದೇ ಮೈದಾನದಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು. ಆ ಪಂದ್ಯದಲ್ಲಿ ಇಮ್ರಾನ್ ಖಾನ್ ಸಾರಥ್ಯದ ಪಾಕಿಸ್ತಾನ, 22 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಇದೀಗ 30 ವರ್ಷಗಳ ಬಳಿಕ ಮತ್ತೆ ಅದೇ ಮೈದಾನದಲ್ಲಿ ವಿಶ್ವಕಪ್ ಫೈನಲ್‌ನಲ್ಲಿ ಆಂಗ್ಲ-ಪಾಕ್ ಮತ್ತೊಮ್ಮೆ ಹೋರಾಟ ನಡೆಸುತ್ತಿವೆ.
ಎರಡೂ ತಂಡಗಳು ತಲಾ ಒಂದು ಬಾರಿ ಟಿ20 ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಗೆದ್ದಿವೆ. ಪಾಕಿಸ್ತಾನ 2009ರಲ್ಲಿ ಮತ್ತು ಇಂಗ್ಲೆಂಡ್ 2010ರಲ್ಲಿ ಚುಟುಕು ಟೂರ್ನಿಯ ಚಾಂಪಿಯನ್ ಆಗಿತ್ತು.
ಇಂಗ್ಲೆಂಡ್ : ಜೋಸ್ ಬಟ್ಲರ್(ನಾಯಕ/ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟನ್, ಮೊಯಿನ್ ಅಲಿ, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್
ಪಾಕಿಸ್ತಾನ: ಬಾಬರ್ ಅಝಮ್ (ನಾಯಕ), ಮುಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮುಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮುಹಮ್ಮದ್ ನವಾಜ್, ಮುಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಹಾರಿಸ್ ರೌಫ್, ಶಾಹೀನ್ ಅಫ್ರಿದಿ