ದುಬೈ: ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್, 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಜಾಸ್ ಬಟ್ಲರ್ ತಂಡವನ್ನು ಮುನ್ನಡೆಸಲಿದ್ದು, ಹಿರಿಯ ಆಲ್‌ರೌಂಡರ್ ಮೊಯಿನ್ ಅಲಿಗೆ ಉಪನಾಯಕನ ಸ್ಥಾನ ನೀಡಲಾಗಿದೆ. ಅಚ್ಚರಿ ಎಂಬಂತೆ ಆರಂಭಿಕ ಆಟಗಾರ ಜೇಸನ್ ರಾಯ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ರಾಯ್, ಕೆಲ ಸಮಯದಿಂದ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾಗಿದ್ದರು.
ಗುರುವಾರ ಆಸ್ಟ್ರೇಲಿಯಾ15 ಸದಸ್ಯರ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ಎರಡನೇ ತಂಡವಾಗಿ ಇಂಗ್ಲೆಂಡ್ ಪ್ರಕಟವಾಗಿದೆ. ಕಳೆದ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಕ್ಕೆ ಶರಣಾಗಿತ್ತು.
ಇಂಗ್ಲೆಂಡ್ ತಂಡ ಕೊನೆಯದಾಗಿ 2010 ರಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿತ್ತು. ಪಾಲ್ ಕಾಲಿಂಗ್‌ವುಡ್ ನೇತೃತ್ಬದಲ್ಲಿ ಇಂಗ್ಲೆಂಡ್ ಗೆದ್ದ ಚೊಚ್ಚೊ ಐಸಿಸಿ ಟ್ರೋಫಿ ಇದಾಗಿತ್ತು. ಟೂರ್ನಿಯಲ್ಲಿ ಒಟ್ಟು 248 ರನ್ ಗಳಿಸಿದ್ದ ಕೆವಿನ್ ಪೀಟರ್ಸನ್, ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.
ಇದು 2016 ರಲ್ಲಿ ಫೈನಲ್ ಪ್ರವೇಶಿಸಿದ್ದ ಇಂಗ್ಲೆಂಡ್, ಇನ್ನೇನು ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡರು ಎಂಬ ಹಂತದಲ್ಲಿ ಮುಗ್ಗರಿಸಿದ್ದು, ಕ್ರಿಕೆಟ್ ಚರಿತ್ರೆಯಲ್ಲೇ ಅಚ್ಚಳಿಯದೆ ದಾಖಲಾಗಿದೆ. ಫೈನಲ್ ಪಂದ್ಯದ ಕೊನೆಯ ಆರು ಎಸೆತಗಳಲ್ಲಿ ವೆಸ್ಟ್ ಇಂಡೀಸ್ ಗೆಲುವಿಗೆ 24 ರನ್‌ಗಳ ಕಠಿಣ ಗುರಿ ಮುಂದಿತ್ತು. ಆದರೆ ಬೆನ್ ಸ್ಟೋಕ್ಸ್ ಎಸೆದ ಅಂತಿಮ ಓವರ್‌ನಲ್ಲಿ ಸತತ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ ಕಾರ್ಲೋಸ್ ಬ್ರಾಥ್‌ವೈಟ್, ಕೆರಿಬಿಯನ್ನರ ಪಾಲಿಗೆ ಹೀರೋ ಆಗಿದ್ದರು.
ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಪ್ರಕಟಿಸಲಾದ ಇಂಗ್ಲೆಂಡ್ ತಂಡ
ಜೋಸ್ ಬಟ್ಲರ್ (ನಾಯಕ) ಮೊಯಿನ್ ಅಲಿ (ಉಪ ನಾಯಕ) ಜೊನಾಥನ್ ಬೆಸ್ಟೊ, ಹ್ಯಾರಿ ಬ್ರೂಕ್ ಸ್ಯಾಮ್ ಕರ್ರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲೆ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.