ಮೆಲ್ಬರ್ನ್: ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾವನ್ನು ಮಣಿಸಿದ ಇಂಗ್ಲೆಂಡ್, 2ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಮೆಲ್ಬರ್ನ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್, ಪಾಕಿಸ್ತಾನ ತಂಡವನ್ನು 5 ವಿಕೆಟ್ ಅಂತರದಲ್ಲಿ ಮಣಿಸಿದೆ.
ಪಾಕಿಸ್ತಾನ ನೀಡಿದ್ದ 138 ರನ್ ಗಳ ಸುಲಭ ಗುರಿಯನ್ನು ಜಾಸ್ ಬಟ್ಲರ್ ಪಡೆ 19ಓವರ್ಗಳಲ್ಲಿ ಚೇಸ್ ಮಾಡಿದೆ. ಆ ಮೂಲಕ ಎರಡನೇ ಬಾರಿಗೆ ಚುಟುಕು ಕ್ರಿಕೆಟ್ ನ ಚಾಂಪಿಯನ್ ಪಟ್ಟದಲ್ಲಿ ವಿರಾಜಮಾನವಾಗಿದೆ. ಇದಕ್ಕೂ ಮೊದಲು 2010ರಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಇಂಗ್ಲೆಂಡ್, ಮೊದಲ ಬಾರಿಗೆ ಟಿ20 ಚಾಂಪಿಯನ್ ಆಗಿತ್ತು.
ಚೇಸಿಂಗ್ ವೇಳೆ ಬೆನ್ ಸ್ಟೋಕ್ಸ್, ಇಂಗ್ಲೆಂಡ್ ಪಾಲಿಗೆ ಆಪತ್ಭಾಂದವನಾದರು. ತಾಳ್ಮೆಯ ಬ್ಯಾಟಿಂಗ್ ನಡೆಸಿದ ಸ್ಟೋಕ್ಸ್, 49 ಎಸೆತಗಳನ್ನು ಎದುರಿಸಿ ಅಜೇಯ 52 ರನ್‌ಗಳಿಸಿದರು. ನಾಯಕ ಜಾಸ್ ಬಟ್ಲರ್ 26, ಹ್ಯಾರಿ ಬ್ರೂಕ್ 20 ಹಾಗೂ ಮೊಯಿಲ್ ಅಲಿ 19 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಇಂಗ್ಲೆಂಡ್ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 138 ರನ್‌ಗಳಿಸುವ ಮೂಲಕ ಒಂದೇ ವರ್ಷದಲ್ಲಿ ಎರಡು ಆವೃತ್ತಿಗಳಲ್ಲೂ ಚಾಂಪಿಯನ್ ಆಗಿ ಸಂಭ್ರಮಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಆಂಗ್ಲರ ಬಿಗಿ ಬೌಲಿಂಗ್ ದಾಳಿಯ ಎದುರು ಬೃಹತ್ ಮೊತ್ತ ಗಳಿಸಲು ವಿಫಲವಾಗಿತ್ತು. ಆರಂಭಿಕ ನಾಯಕ ಬಾಬರ್ ಅಝಂ 32 ಮತ್ತು ಮಧ್ಯಮ ಕ್ರಮಾಂಕದಲ್ಲಿ ಶಾನ್ ಮಸೂದ್ 38 ಗಳಿಸಿದ 32 ರನ್‌ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಿತ್ತು.