ಸಿಡ್ನಿ: ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಕೆಚ್ಚೆದೆಯ ಹೋರಾಟದ ಪ್ರದರ್ಶಿಸಿದ ಅಫ್ಘಾನಿಸ್ತಾನ, ಕೇವಲ 4 ರನ್ ಗಳ ಅಂತರದಲ್ಲಿ ವೀರೋಚಿತ ಸೋಲು ಕಂಡಿದೆ. ಅಡಿಲೇಡ್ ನಲ್ಲಿ ನಡೆದ ಪಂದ್ಯದಲ್ಲಿ 169 ರನ್ಗಳ ಗುರಿ ಪಡೆದಿದ್ದ ಅಫ್ಘಾನಿಸ್ತಾನದ ಪರವಾಗಿ, ರಶೀದ್ ಖಾನ್ ಅಂತಿಮ ಎಸೆತದವರೆಗೂ ಗೆಲುವಿಗಾಗಿ ಹೋರಾಟ ನಡೆಸಿದರು. 17 ಓವರ್ನ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ಅಫ್ಘಾನ್ ಪಡೆ, ಅಂತಿಮ ಮೂರು ಓವರ್ಗಳಲ್ಲಿ 49 ರನ್ ಗಳಿಸಬೇಕಾಗಿತ್ತು.
18ನೇ ಓವರ್ನ ಅಂತಿಮ ಎರಡು ಎಸೆತಗಳನ್ನು ಸಿಕ್ಸರ್ಗೆ ಅಟ್ಟಿದ ಖಾನ್, 19ನೇ ಓವರ್ನಲ್ಲೂ ತಲಾ 1 ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಮಾರ್ಕಸ್ ಸ್ಟೋಯ್ನಿಸ್ ಎಸೆದ ಅಂತಿಮ 6 ಎಸೆತಗಳಲ್ಲಿ ಅಪ್ಘಾನ್ ಗೆಲುವಿಗೆ 22 ರನ್ ಗುರಿ ಮುಂದಿತ್ತು. ಆದರೆ 2 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ರಶೀದ್, ಒಟ್ಟು 16 ರನ್ ಗಳಿಸಿದರಾದರೂ 4 ರನ್ಗಳ ಅಂತರದಲ್ಲಿ ಗೆಲುವಿನಿಂದ ದೂರ ಉಳಿಯಿತು.
23 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿಗಳ ನೆರವಿನಿಂದ ರಶೀದ್ ಖಾನ್ ಅಜೇಯ 48 ರನ್ ಗಳಿಸಿದರು.
ಒಂದು ಹಂತದಲ್ಲಿ 14ನೇ ಓವರ್ನಲ್ಲಿ 99 ರನ್ಗಳಿಸುವಷ್ಟರಲ್ಲಿಯೇ ಅಫ್ಘಾನಿಸ್ತಾನ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ರಹ್ಮಾನುಲ್ಲಾ ಗುರ್ಬಾಝ್ (30 ರನ್), ಇಬ್ರಾಹಿಂ ಝದ್ರಾನ್ ( 26 ರನ್) ತಂಡದ ನೆರವಿಗೆ ನಿಂತರು. 23 ಎಸೆತಗಳಲ್ಲಿ 39 ರನ್ (4×2, 6×3)ಗಳಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಗುಲ್ಬಾದಿನ್ ನಬಿ ರನೌಟ್ಗೆ ಬಲಿಯಾಗಿದ್ದು ಪಂದ್ಯಕ್ಕೆ ತಿರುವು ಕೊಟ್ಟಿತು.
ಈ ಗೆಲುವಿನೊಂದಿಗೆ ಸೂಪರ್ 12 ಹಂತದಲ್ಲಿ ಎಲ್ಲಾ 5 ಪಂದ್ಯಗಳನ್ನು ಮುಗಿಸಿರುವ, ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ತಂಡಗಳು ತಲಾ 7 ಅಂಕಗಳನ್ನು ಹೊಂದಿದೆ. ಗ್ರೂಪ್ 1ರಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್, ಐರ್ಲೆಂಡ್ ವಿರುದ್ಧ 35 ರನ್ಗಳ ಅಂತರದಲ್ಲಿ ಜಯ ಸಾಧಿಸಿತ್ತು . 5 ಅಂಕಗಳನ್ನು ಹೊಂದಿರುವ ಇಂಗ್ಲೆಂಡ್, ನಾಳೆ ಶ್ರೀಲಂಕಾ ವಿರುದ್ಧ ತನ್ನ ಅಂತಿಮ ಪಂದ್ಯವನ್ನಾಡಲಿದೆ.
ಶನಿವಾರದ ಪಂದ್ಯದಲ್ಲಿ ಇಂಗ್ಲೆಂಡ್ ಜಯ ಸಾಧಿಸಿದರೆ ರನ್ ರೇಟ್ ಆಧಾರದಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದ್ದು, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರ ನಡೆಯಲಿದೆ.