ಆಡಿಲೇಡ್ : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನ ಎರಡನೇ ಸೆಮಿಫೈನಲಿನಲ್ಲಿಂದು ಭಾರತ ಮತ್ತು ಇಂಗ್ಲಂಡ್ ಮುಖಾಮುಖಿಯಾಗುತ್ತಿದೆ. ಟಾಸ್ ಜಯಿಸಿದ ಇಂಗ್ಲಂಡ್ ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿದೆ.
ಭಾರತ ಸೂಪರ್ 12ರ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಆಡಿದ್ದ ಅದೇ 11ರ ಬಳಗವನ್ನು ಇಂಗ್ಲಂಡ್ ವಿರುದ್ಧವೂ ಕಣಕ್ಕಿಳಿಸಿದೆ. ಇದೇ ವೇಳೆ ಇಂಗ್ಲಂಡ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಡೇವಿಡ್ ಮಲಾನ್ ಮತ್ತು ಮಾರ್ಕ್ ವುಡ್ ಬದಲಿಗೆ ಫಿಲ್ ಸಾಲ್ಟ್ ಹಾಗೂ ಕ್ರಿಸ್ ಜೋರ್ಡಾನ್ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಮೊದಲ ಸೆಮಿಫೈನಲಿನಲ್ಲಿ ಜಯಿಸಿರುವ ಪಾಕಿಸ್ತಾನ ಇದೀಗಾಗಲೇ ಫೈನಲ್ ತಲುಪಿದೆ. ಇಂದಿನ ಪಂದ್ಯಾಟದ ವಿಜಯಿಗಳು ನವಂಬರ್ 13ರಂದು ಮೆಲ್ಬರ್ನ್ ನಲ್ಲಿ ನಡೆಯುವ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದಾರೆ.
ಕುತೂಹಲ ಹಂತ ತಲುಪಿರುವ ಟಿ20 ವಿಶ್ವಕಪ್ ಪಂದ್ಯಾಕೂಟದಲ್ಲಿ ಸೆಮಿ ಫೈನಲ್ ಹಂತಕ್ಕೆ ತಲುಪಿರುವ ಉಭಯ ತಂಡಗಳು ಫೈನಲ್ ಹಂತಕ್ಕಾಗಿ ತೇರ್ಗಡೆಗೊಳ್ಳಲು ಇಂದು ಪರಸ್ಪರ ಸೆಣಸಾಡಲಿದೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ನವೆಂಬರ್ 13 ರಂದು ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನವನ್ನು ಫೈನಲ್‌ನಲ್ಲಿ ಎದುರಿಸಲಿದೆ.