Home ಟಾಪ್ ಸುದ್ದಿಗಳು ಟಿ20 ಕ್ರಿಕೆಟ್‌ ಸರಣಿ |ಆಫ್ರಿಕಾ ವಿರುದ್ಧ ಕ್ಲೀನ್‌ ಸ್ವೀಪ್‌ ಲೆಕ್ಕಾಚಾರದಲ್ಲಿ ರೋಹಿತ್‌ ಶರ್ಮಾ ಬಳಗ

ಟಿ20 ಕ್ರಿಕೆಟ್‌ ಸರಣಿ |ಆಫ್ರಿಕಾ ವಿರುದ್ಧ ಕ್ಲೀನ್‌ ಸ್ವೀಪ್‌ ಲೆಕ್ಕಾಚಾರದಲ್ಲಿ ರೋಹಿತ್‌ ಶರ್ಮಾ ಬಳಗ

ಇಂದೋರ್: ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಇಂದೋರ್‌ನಲ್ಲಿ ಮಂಗಳವಾರ ನಡೆಯಲಿದೆ. ಈಗಾಗಲೇ 2-0 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿರುವ ರೋಹಿತ್‌ ಬಳಗ, ಅಂತಿಮ ಪಂದ್ಯವನ್ನೂ ಗೆದ್ದು‘ಕ್ಲೀನ್‌ಸ್ವೀಪ್‌’ ಸಾಧನೆಯ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

ಇಂದೊರ್‌ ಪಂದ್ಯದಿಂದ ಆರಂಭಿಕ ಕೆ.ಎಲ್‌. ರಾಹುಲ್‌ ಮತ್ತು ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಕೊಹ್ಲಿ ಜಾಗದಲ್ಲಿ ಶ್ರೇಯಸ್‌ ಅಯ್ಯರ್‌ ಮತ್ತು ರಾಹುಲ್‌ ಬದಲು ಮುಹಮ್ಮದ್‌ ಸಿರಾಜ್‌ ತಂಡವನ್ನು ಕೂಡಿಕೊಳ್ಳಲಿದ್ದಾರೆ. ರಾಹಲು ಬದಲು ಸೂರ್ಯಕುಮಾರ್‌ ಅಥವಾ ರಿಷಭ್‌ ಪಂತ್‌  ರೋಹಿತ್‌ ಜತೆ ಇನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ.

ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್‌ ಅಂತರದಲ್ಲಿ ಗೆದ್ದಿದ್ದ ಭಾರತ,  ಗುವಾಹಟಿಯಲ್ಲಿ ಭಾನುವಾರ ನಡೆದಿದ್ದ ಪಂದ್ಯವನ್ನು 16 ರನ್‌ಗಳಿಂದ ಗೆದ್ದಿತ್ತು. ಈ ಮೂಲಕ ದಕ್ಷಿಣ ಆಫ್ರಿಕಾ ಎದುರು ತವರಿನಲ್ಲಿ ಮೊದಲ ಬಾರಿ ಟಿ20 ಸರಣಿ ಗೆದ್ದ ಸಾಧನೆ ಮಾಡಿತ್ತು. ಇನ್ನು ಎರಡು ವಾರಗಳಲ್ಲಿ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಭಾರತ ಕೊನೆಯ ʻಅಭ್ಯಾಸ ಪಂದ್ಯʼವನ್ನಾಡಲಿದೆ.

ಬ್ಯಾಟಿಂಗ್‌ನಲ್ಲಿ ಭಾರತ ಬಲಿಷ್ಠವಾಗಿದೆಯಾದರೂ ಬೌಲಿಂಗ್‌ ವಿಭಾಗದಲ್ಲಿನ ಸಮಸ್ಯೆಗಳು ಮುಂದುವರಿದಿದೆ. ಈ ನಡುವೆ ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾ ಸಹ ತಂಡದಿಂದ ಹೊರನಡೆದಿದ್ದಾರೆ. ಆಸ್ಟ್ರೇಲಿಯಾ ನೆಲದ ಪಿಚ್‌ಗಳು ಸಾಮಾನ್ಯವಾಗಿ ಬೌಲರ್‌ಗಳಿಗೆ ನೆರವು ನೀಡುತ್ತವೆ. ಹೀಗಿರುವಾಗ ದುರ್ಬಲ ಬೌಲಿಂಗ್‌ ವಿಭಾಗ ಭಾರತದ ವಿಶ್ವಕಪ್‌ ಕನಸಿಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ. ಬೌಲರ್‌ಗಳು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ವಿಫಲರಾಗಿರುವುದು ಭಾರತಕ್ಕೆ ಚಿಂತೆ ಉಂಟುಮಾಡಿದೆ. ಬೂಮ್ರಾ ಅನುಪಸ್ಥಿತಿಯಲ್ಲಿ  ಆರ್ಷದೀಪ್‌ ಸಿಂಗ್‌ ಮೊದಲ ಪಂದ್ಯದಲ್ಲಿ ಪ್ರಭಾವಿ ಎನಿಸಿದ್ದರೂ ಭಾನುವಾರ 4 ಓವರ್‌ಗಳಲ್ಲಿ 62 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.

ಮತ್ತೊಂದೆಡೆ  ‘ಕ್ಲೀನ್‌ಸ್ವೀಪ್‌’ ಮುಖಭಂಗ ತಪ್ಪಿಸಿಕೊಳ್ಳಲು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ, ಮಂಗಳವಾರದ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಸಂಭಾವ್ಯ ತಂಡ

ಭಾರತ: ರೋಹಿತ್‌ ಶರ್ಮಾ (ನಾಯಕ), ಸೂರ್ಯಕುಮಾರ್‌ ಯಾದವ್, ರಿಷಭ್ ಪಂತ್‌, ದಿನೇಶ್‌ ಕಾರ್ತಿಕ್, ಆರ್‌.ಅಶ್ವಿನ್‌, ಯಜುವೇಂದ್ರ ಚಾಹಲ್, ಅಕ್ಷರ್‌ ಪಟೇಲ್, ಆರ್ಷದೀಪ್‌ ಸಿಂಗ್, ಹರ್ಷಲ್ ಪಟೇಲ್, ದೀಪಕ್‌ ಚಾಹರ್‌, ಉಮೇಶ್‌ ಯಾದವ್, ಶ್ರೇಯಸ್‌ ಅಯ್ಯರ್‌, ಶಹಬಾಜ್‌ ಅಹ್ಮದ್, ಮೊಹಮ್ಮದ್‌ ಸಿರಾಜ್

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿಕಾಕ್, ಬಿಜಾರ್ನ್ ಫಾರ್ಟ್ಯೂನ್, ರೀಜಾ ಹೆನ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಮಾರ್ಕೊ ಜಾನ್ಸೆನ್, ಕೇಶವ ಮಹಾರಾಜ್, ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಎನ್ರಿಚ್ ನಾಕಿಯಾ, ವೇಯ್ನ್ ಪಾರ್ನೆಲ್, ಆ್ಯಂಡಿಲ್ ಪಿಶುವಾಯೊ, ಡ್ವೆನ್ ಪ್ರಿಟೊರಿಯಸ್, ಕಗಿಸೊ ರಬಾಡ, ರಿಲಿ ರೊಸೊ, ತಬ್ರೇಜ್ ಶಮ್ಸಿ, ಟ್ರಿಸ್ಟನ್ ಸ್ಟಬ್ಸ್.

Join Whatsapp
Exit mobile version