ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ, 4 ವಿಕೆಟ್ ಅಂತರದಲ್ಲಿ ಜಯಭೇರಿ ಬಾರಿಸಿತ್ತು.
ಮೂರು ಪಂದ್ಯಗಳ ಸರಣಿಯಲ್ಲಿ ಜೀವಂತವಾಗುಳಿಯಬೇಕಾದರೆ ಇಂದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಆದರೆ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಕಳೆದ ಕೆಲ ದಿನಗಳಿಂದ ನಾಗ್ಪುರದಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ ಮೈದಾನವನ್ನು ಪೂರ್ತಿಯಾಗಿ ಪ್ಲಾಸ್ಟಿಕ್ ಹೊದಿಕೆಗಳಿಂದ ಮುಚ್ಚಲಾಗಿದೆ. ಗುರುವಾರದಂದು ಎರಡೂ ತಂಡಗಳ ಅಭ್ಯಾಸವನ್ನು ರದ್ದುಗೊಳಿಸಲಾಗಿತ್ತು. ಶುಕ್ರವಾರವೂ ಮಳೆ ಮುಂದುವರಿದರೆ ಓವರ್ ಕಡಿತ ಅಥವಾ ಪಂದ್ಯ ರದ್ದಾಗುವ ಆತಂಕ ಎದುರಾಗಿದೆ.
ವಿದರ್ಭ ಕ್ರಿಕೆಟ್ ಸ್ಟೇಡಿಯಂನ ಪಿಚ್ ಮೊಹಾಲಿಗಿಂತಲೂ ಭಿನ್ನವಾಗಿದ್ದು, ಬೌಲರ್ ಗಳ ಪ್ರದರ್ಶನ ಪಂದ್ಯದ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಮೊದಲ ಪಂದ್ಯದಲ್ಲಿ208 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿದ ಹೊರತಾಗಿಯೂ ಪಂದ್ಯವನ್ನು ಗೆಲ್ಲಲು ರೋಹಿತ್ ಬಳಗಕ್ಕೆ ಸಾಧ್ಯವಾಗಿರಲಿಲ್ಲ. ಭಾರತದ ಬೌಲಿಂಗ್ ವಿಭಾಗವು ಎಷ್ಟು ದುರ್ಬಲವಾಗಿದೆ ಎಂಬುದು ಏಷ್ಯಾಕಪ್ನಲ್ಲೂ, ಆ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿಯೂ ಜಗಜ್ಜಾಹೀರಾಗಿದೆ.
ಪ್ರಮುಖ ಬೌಲರ್ಗಳಾದ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಬರೋಬ್ಬರಿ 101 ರನ್ ಬಿಟ್ಟುಕೊಟ್ಟಿದ್ದರು. ಎರಡನೇ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಕೆಲ ಬದಲಾವಣೆಗಾಳಾಗು ಸಾಧ್ಯತೆಗಳಿದ್ದು, ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಲೇಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೆ ಅವು ಸಂಪೂರ್ಣ ಫಿಟ್ ಆಗಿರುವ ಕುರಿತು ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ.
ಬೆನ್ನು ನೋವಿನಿಂದ ಬಳಲುತ್ತಿದ್ದ ಬುಮ್ರಾ ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಏಷ್ಯಾ ಕಪ್ನಲ್ಲೂ ಅವರು ಭಾಗವಹಿಸಿರಲಿಲ್ಲ. ಬುಮ್ರಾ ಅನುಪಸ್ಥಿತಿ ಏಷ್ಯಾ ಕಪ್ನಲ್ಲಿ ಭಾರತಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿತ್ತು.
19ನೇ ಓವರ್ ಸ್ಪೆಷಲಿಸ್ಟ್ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಟ್ರೋಲ್ಗೆ ಒಳಗಾಗಿರುವ ಭುವನೇಶ್ವರ್ ಕುಮಾರ್, ಯಾವುದೇ ರೀತಿಯಲ್ಲೂ ತಂಡಕ್ಕೆ ನೆರವಾಗುತ್ತಿಲ್ಲ.
ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಇದಕ್ಕೂ ಮುನ್ನ ಭಾರತ ಕೇವಲ 5 ಟಿ20 ಪಂದ್ಯಗಳನ್ನಷ್ಟೇ ಆಡಲಿದೆ. ಆದರೆ ಬೌಲಿಂಗ್ ವಿಭಾಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದ ಹೊರತು ವಿಶ್ವಕಪ್ ತೆರಳಿದರೆ ಏಷ್ಯಾ ಕಪ್ನಲ್ಲಿ ಆದ ಅನುಭವವೇ ಮತ್ತೆ ಮರುಕಳಿಸುವುದರಲ್ಲಿ ಅನುಮಾನವಿಲ್ಲ.
ಭರ್ಜರಿ ಫಾರ್ಮ್’ನಲ್ಲಿರುವ ಆಸೀಸ್ ತಂಡ
ತಮ್ಮದೇ ನೆಲದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತಕ್ಕೆ ಬಂದಿಳಿದಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದೆ. ಡೇವಿಡ್ ವಾರ್ನರ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್ ಹಾಗೂ ಮಿಷೆಲ್ ಮಾರ್ಷ್ ತಂಡದಿಂದ ಹೊರಗುಳಿದಿದ್ದಾರೆ. ಅದಾಗಿಯೂ, ಆರೋನ್ ಫಿಂಚ್ ಬಳಗ ಭರ್ಜರಿ ಫಾರ್ಮ್’ನಲ್ಲಿದೆ.
ಸಂಭಾವ್ಯ ಹನ್ನೊಂದರ ಬಳಗ
ಭಾರತ XI: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್
ಆಸ್ಟ್ರೇಲಿಯಾ XI: ಆರನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್ವುಡ್