ದುಬೈ: ಐಸಿಸಿ T-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಚೊಚ್ಚಲ T-20 ವಿಶ್ವಕಪ್ ಕಿರೀಟಕ್ಕಾಗಿ ಹೋರಾಡಲಿವೆ.
ಟಾಸ್ ಗೆದ್ದವರೇ ಮ್ಯಾಚ್ ಗೆಲ್ಲುವ ಸಾಧ್ಯತೆ..!?
ದುಬೈ ಕ್ರೀಡಾಂಗಣದಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲೂ ಟಾಸ್ ಪ್ರಮುಖ ಪಾತ್ರ ವಹಿಸಿದೆ. ಚೇಸ್ ಮಾಡಿದ ತಂಡಗಳೇ ಪಂದ್ಯವನ್ನು ಗೆದ್ದಿವೆ. ರಾತ್ರಿ ಇಬ್ಬನಿ ಸುರಿಯುವುದರಿಂದ ಬೌಲಿಂಗ್ ತಂಡಕ್ಕೆ ಸಮಸ್ಯೆಯಾಗುತ್ತಿದೆ. ಪ್ರಸಕ್ತ ಟೂರ್ನಿಯಲ್ಲಿ ದುಬೈ ಮೈದಾನದಲ್ಲಿ ನಡೆದ 12 ಪಂದ್ಯಗಳಲ್ಲಿ 11 ರಲ್ಲೂ ಗುರಿ ಬೆನ್ನತ್ತಿದ ತಂಡಗಳೇ ಗೆಲುವು ಸಾಧಿಸಿದೆ.
ಸೆಮಿಫೈನಲ್ ಸೇರಿದಂತೆ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಐದು ಬಾರಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತ್ತು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಪಂದ್ಯವನ್ನೂ ಸೋತಿತ್ತು. ಆದರೆ ಮಧ್ಯಾಹ್ನದ ಎರಡು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ದುಕೊಂಡು ಗೆಲುವು ಸಾಧಿಸಿತ್ತು.
ಇದೇ ಮೊದಲ ಬಾರಿಗೆ ಕೇನ್ ವಿಲಿಯಮ್ಸನ್ ನೇತೃತ್ವದಲ್ಲಿ ನ್ಯೂಜಿಲೆಂಡ್ T-20 ವಿಶ್ವಕಪ್ ಫೈನಲ್ ಹಂತವನ್ನು ತಲುಪಿದೆ. 2019ರಲ್ಲಿ ಏಕದಿನ ವಿಶ್ವಕಪ್’ಫೈನಲ್ ತಲುಪಿದ್ದ ನ್ಯೂಜಿಲೆಂಡ್ ಇಂಗ್ಲೆಂಡ್ ವಿರುದ್ಧ ರೋಚಕ ಸೋಲು ಕಂಡಿತ್ತು. ಆದರೆ ಪ್ರಸಕ್ತ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸೇಡು ತೀರಿಸಿಕೊಂಡಿರುವ ಕಿವೀಸ್, ಆಂಗ್ಲನ್ನರನ್ನು ಮನೆಗೆ ಕಳುಹಿಸಿದೆ. ಈ ನಡುವೆ ಭಾರತವನ್ನು ಮಣಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್ ಕಿರೀಟವನ್ನೂ ನ್ಯೂಜಿಲೆಂಡ್ ತನ್ನದಾಗಿಸಿಕೊಡಿತ್ತು.
ಮತ್ತೊಂದೆಡೆ, ಹ್ಯಾಟ್ರಿಕ್ ಸಾಧನೆಯೊಂದಿಗೆ ಒಟ್ಟು 5 ಬಾರಿ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್’ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಆದರೆ T-20 ವಿಶ್ವಕಪ್ ಪ್ರಶಸ್ತಿಯು ಇನ್ನೂ ಕನಸಾಗಿಯೇ ದೂರ ಉಳಿದಿದೆ. 2010ರಲ್ಲಿ T-20 ವಿಶ್ವಕಪ್ ಫೈನಲ್ ಪ್ರವೇಶಿಸಿತಾದರೂ, ಇಂಗ್ಲೆಂಡ್ ವಿರುದ್ಧ ಸೋಲು ಕಾಣುವಂತಾಗಿತ್ತು. ಇದೀಗ ಎರಡನೇ ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ.
ಟಿ-20 ವಿಶ್ವಕಪ್’ನಲ್ಲಿ ಉಭಯ ತಂಡಗಳು ಒಂದು ಬಾರಿ ಮಾತ್ರ ಮುಖಾಮುಖಿಯಾಗಿವೆ. 2016ರಲ್ಲಿ ನಡೆದ ಆ ಪಂದ್ಯದಲ್ಲಿ ನ್ಯೂಜಿಲೆಂಡ್ ವಿಜಯಿಯಾಗಿತ್ತು. ಒಟ್ಟಾರೆಯಾಗಿ ಉಭಯ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು ಆಸ್ಟ್ರೇಲಿಯಾ 9 ಪಂದ್ಯ ಹಾಗೂ ನ್ಯೂಜಿಲೆಂಡ್ 5 ಪಂದ್ಯಗಳಲ್ಲಿ ಗೆದ್ದಿವೆ.
ಮಹತ್ವದ ಫೈನಲ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡದಲ್ಲಿ ಗಾಯದ ಸಮಸ್ಯೆ ತಲೆದೂರಿದೆ. ಸೆಮಿಫೈನಲ್ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಡೆವೋನ್ ಕಾನ್ವೆ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಸ್ಥಾನಕ್ಕೆ ಟಿಮ್ ಸೀಫರ್ಟ್ ಆಯ್ಕೆಯಾಗುವ ಸಾಧ್ಯತೆ ಇದೆ.