ಬೆಂಗಳೂರು: ಮುಂಬರುವ ಜೂನ್ ತಿಂಗಳಿನಲ್ಲಿ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ-20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಐರ್ಲೆಂಡ್ ಹಾಗೂ ಸ್ಕಾಟ್‌ಲೆಂಡ್ ತಂಡಗಳಿಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಪ್ರಾಯೋಜಕತ್ವ ವಹಿಸಲಿದೆ.
ಕೆಎಂಎಫ್ ತನ್ನ ನಂದಿನಿ ಬ್ರ್ಯಾಂಡನ್ನು ಜಾಗತಿಕ ಮಟ್ಟಕ್ಕೆ ಏರಿಸುವ ಉದ್ದೇಶದಿಂದ ಈ ತೀರ್ಮಾನವನ್ನು ತೆಗೆದುಕೊಂಡಿದೆ. ಅಲ್ಲದೆ, ಇದೇ ವೇಳೆ ಅಮೆರಿಕದ ಮಾರುಕಟ್ಟೆಯನ್ನು ಹಿಡಿಯಲು ‘ನಂದಿನಿ ಸ್ಪ್ಲಾಶ್’ ಎಂಬ ಶಕ್ತಿ ವರ್ಧಕ ಪೇಯವನ್ನು ಕೂಡ ಕೆಎಂಎಫ್ ಬಿಡುಗಡೆ ಮಾಡಲಿದೆ. ಮಾವು, ಕಿತ್ತಲೆ, ಲಿಂಬೆ ಸಹಿತ ನಾಲ್ಕೈದು ಮಾದರಿಗಳಲ್ಲಿ ಈ ಶಕ್ತಿ ವರ್ಧಕ ಪೇಯವನ್ನು ಅಮೆರಿಕ ಗ್ರಾಹಕರಿಗಾಗಿಯೇ ಸಿದ್ಧಪಡಿಸಲಾಗುತ್ತಿದೆ.
ಕೆಎಂಎಫ್ ಇಷ್ಟು ಮಾತ್ರವಲ್ಲದೆ, ಯುಎಇ, ಶಾರ್ಜಾದಲ್ಲಿ ಹೆಚ್ಚುವರಿ ನಂದಿನಿ ಪಾರ್ಲರ್ ತೆರೆಯುವ ಉದ್ದೇಶವನ್ನೂ ವ್ಯಕ್ತಪಡಿಸಿದೆ. ಇದೇ ಬಗೆಯ ಪಾರ್ಲರ್‌ಗಳನ್ನು ಮಧ್ಯಪ್ರಾಚ್ಯ ದೇಶಗಳಲ್ಲೂ ಆರಂಭಿಸಲು ಸಂಸ್ಥೆ ಚಿಂತನೆ ನಡೆಸಿದೆ.