ಕಲಬುರಗಿ: ಭಾರತೀಯ ಫುಟ್ಬಾಲ್ ತಂಡದ ಮಾಜಿ ಆಟಗಾರ ಮತ್ತು ಒಲಿಂಪಿಯನ್, ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ತರಬೇತುದಾರ ಸಯ್ಯದ್ ಶಾಹಿದ್ ಹಕೀಮ್ ಭಾನುವಾರ ಗುಲ್ಬರ್ಗಾದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
ಹಕೀಮ್ ‘ಸಾಬ್’ ಎಂದೇ ಪ್ರಸಿದ್ಧರಾಗಿದ್ದ ಅವರು ಇತ್ತೀಚೆಗೆ ವಯೋಸಹಜ ಖಾಯಿಲೆಯಿಂದಾಗಿ ಗುಲ್ಬರ್ಗಾದ ಆಸ್ಪತ್ರೆಗೆ ದಾಖಲಾಗಿದ್ದರು.
ಐದು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಫುಟ್‌ಬಾಲ್ ಕ್ಷೇತ್ರದಲ್ಲಿ ಮಿಂಚಿದ್ದ ಹಕೀಮ್ ಅವರು ಧ್ಯಾನ್ ಚಂದ್ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಸೇರಿದಂತೆ ಕ್ರೀಡಾ ಕ್ಷೇತ್ರದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 1982 ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ದಿವಂಗತ ಪಿಕೆ ಬ್ಯಾನರ್ಜಿ ಅವರಿಗೆ ಹಕೀಮ್ ಅವರು ಸಹಾಯಕ ತರಬೇತುದಾರರಾಗಿದ್ದರು. ಮೆರ್ಡೆಕಾ ಟೂರ್ನಮೆಂಟ್ ನಲ್ಲಿ ಆಡಿದ್ದ ತಂಡಕ್ಕೆ ಹಕೀಮ್ ತರಬೇತುದಾರರಾಗಿದ್ದರು.
1988 ರಲ್ಲಿ ಮಹೀಂದ್ರಾ & ಮಹೀಂದ್ರಾ ತಂಡ ಡ್ಯುರಾಂಡ್ ಕಪ್ ಪ್ರಶಸ್ತಿ ಗೆಲ್ಲಲು ಹಕೀಮ್ ಅವರ ತರಬೇತಿಯೇ ಕಾರಣವಾಗಿತ್ತು. ಮಹೀಂದ್ರಾ ತಂಡ ಬಲಿಷ್ಠ ಈಸ್ಟ್ ಬೆಂಗಾಲ್ ತಂಡವನ್ನು ಸೋಲಿಸಿತ್ತು. ಸಲಗಾಂವ್ ಕರ್ ತಂಡಕ್ಕೂ ಹಕೀಮ್ ತರಬೇತುದಾರರಾಗಿದ್ದರು. ಅವರು ಕೊನೆಯ ಬಾರಿಗೆ 2004-05ರಲ್ಲಿ ಬೆಂಗಾಲ್ ಮುಂಬೈ ಎಫ್‌ಸಿ ತಂಡಕ್ಕೆ ತರಬೇತಿ ನೀಡಿದ್ದರು.
ಭಾರತೀಯ ವಾಯುಪಡೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಕಾರ್ಯನಿರ್ವಹಿಸಿದ್ದ ಹಕೀಮ್ ಅವರು ಭಾರತ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಹಕೀಮ್ ಅವರು ಫಿಫಾ ಬ್ಯಾಡ್ಜ್ ಹೊಂದಿದ್ದ ಅಂತಾರಾಷ್ಟ್ರೀಯ ತೀರ್ಪುಗಾರರೂ ಆಗಿದ್ದರು. ಅವರಿಗೆ 2017ರಲ್ಲಿ ಪ್ರತಿಷ್ಠಿತ ಧ್ಯಾನ್ ಚಂದ್ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಿದ್ದರು.
ಫುಟ್ವಾಲ್ ತಂಡದಲ್ಲಿ ಹಕೀಮ್ ಅವರು ಹೆಚ್ಚಾಗಿ ಮಿಡ್ ಫೀಲ್ಡರ್ ಸ್ಥಾನದಲ್ಲಿ ಆಡುತ್ತಿದ್ದರು. ಅವರ ತಂದೆ ಸಯ್ಯದ್ ಅಬ್ದುಲ್ ಹಕೀಮ್ ಕೂಡ ಒಂದು ಕಾಲದ ಫುಟ್ಬಾಲ್ ಆಟಗಾರರಾಗಿದ್ದರು. ಹಕೀಮ್ ಅವರಿಗೆ ಅವರ ತಂದೆಯೇ ಕೋಚ್ ಕೂಡ ಆಗಿದ್ದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ –ಎಸ್ ಡಿಪಿಐ ಸಕ್ರಿಯ ಕಾರ್ಯಕರ್ತರೂ ಆಗಿದ್ದ ಹಕೀಮ್ ಅವರ ನಿಧನಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಸೇರಿದಂತೆ ಹಲವು ರಾಜಕೀಯ, ಕ್ರೀಡಾ ಕ್ಷೇತ್ರದ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ.