Home ಟಾಪ್ ಸುದ್ದಿಗಳು ಭಾರತದ ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕಿಸ್ತಾನದ ಧ್ವಜ ಬಳಸಿದ ಸುವರ್ಣ ನ್ಯೂಸ್

ಭಾರತದ ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕಿಸ್ತಾನದ ಧ್ವಜ ಬಳಸಿದ ಸುವರ್ಣ ನ್ಯೂಸ್

ಬೆಂಗಳೂರು: ಲೋಕ ಸಭಾ ಚುನಾವಣೆಯ ಹೊತ್ತಿನಲ್ಲಿಯೇ ಜನಸಂಖ್ಯಾ ವರದಿಯನ್ನು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಬಿಡುಗಡೆ ಮಾಡಿದ್ದು, ಈ ಸಂಬಂಧವಾಗಿ ಸುವರ್ಣ ನ್ಯೂಸ್ ಡಿಬೇಟ್ ಕಾರ್ಯಕ್ರಮ ಮಾಡಿದೆ. ಕಾರ್ಯಕ್ರಮ ನಿರ್ವಾಹಕ ಅಜಿತ್ ಹನುಮಕ್ಕನವ‌ರ್, ಹಿಂದೂಗಳ ಜನಸಂಖ್ಯೆಯನ್ನು ತಿಳಿಸಲು ಭಾರತದ ಧ್ವಜ ಮತ್ತು ಭಾರತದ ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕಿಸ್ತಾನದ ಧ್ವಜ ಬಳಸಿದ್ದಾರೆ ಎಂದು ವರದಿಯಾಗಿದ್ದು, ಆಕ್ರೋಶ ವ್ಯಕ್ತವಾಗಿದೆ.

ದೇಶದಲ್ಲಿ ಹಿಂದೂಗಳ ಜನ ಸಂಖ್ಯೆ ಇಳಿಕೆಯಾಗಿದೆ ಹಾಗೂ ಮುಸ್ಲಿಮರ ಜನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಚುನಾವಣೆಯ ಮಧ್ಯೆ ವರದಿ ಬಿಡುಗಡೆ ಮಾಡಿತ್ತು. ಇದು ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಈ ವರದಿಯನ್ನು ಆಧರಿಸಿ ಮುಖ್ಯವಾಹಿನಿಯ ದೃಶ್ಯ ಮಾಧ್ಯಮಗಳು ಸರಣಿ ಚರ್ಚೆ ಕಾರ್ಯಕ್ರಮಗಳನ್ನು ಕೂಡ ಮಾಡುತ್ತಿವೆ. ಹಾಗೆಯೇ, ಕನ್ನಡದ ಸುವರ್ಣ ನ್ಯೂಸ್ ಎಂಬ ಸುದ್ದಿ ವಾಹಿನಿಯಲ್ಲೂ ಈ ಬಗ್ಗೆ ಡಿಬೇಟ್ ಕಾರ್ಯಕ್ರಮ ಪ್ರಸಾರವಾಗಿದೆ. ಆದರೆ ಅದರಲ್ಲಿ ಭಾರತದ ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕಿಸ್ತಾನದ ಧ್ವಜ ಬಳಸಲಾಗಿದೆ. ಇದನ್ನು ತಿಳಿಸುತ್ತಾ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್ ಕಾರ್ಯಕ್ರಮದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಭಾರತೀಯ ಹಿಂದೂಗಳಿಗೆ ಭಾರತದ ಧ್ವಜ ಮತ್ತು ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನದ ಧ್ವಜ ಬಳಸಲಾಗಿದೆ. @AsianetNewsSN ಮತ್ತು ಆಂಕರ್ ಅಜಿತ್ ಹನುಮಕ್ಕನವ‌ರ್ ಇಎಸಿ-ಪಿಎಂ ವರದಿಯನ್ನು ಚರ್ಚಿಸುವಾಗ 20 ಕೋಟಿ ಭಾರತೀಯ ಮುಸ್ಲಿಮರನ್ನು ಹೀಗೆ ಚಿತ್ರಿಸಿದ್ದಾರೆ. ಕರ್ನಾಟಕದ ಸಂಘಟನೆಗಳು ಆಂಕರ್ ಮತ್ತು ಚಾನೆಲ್ ವಿರುದ್ಧ ದೂರು ದಾಖಲಿಸುತ್ತವೆ ಎಂದುಕೊಂಡಿದ್ದೇನೆ ಎಂದು ಝುಭೇರ್ Xನಲ್ಲಿ ವೀಡಿಯೊದೊಂದಿಗೆ ಬರೆದುಕೊಂಡಿದ್ದಾರೆ.

Join Whatsapp
Exit mobile version