ಬೆಂಗಳೂರು : ಪ್ರಕೃತಿ, ಪರಿಸರವೂ ಉಳಿಯಬೇಕು, ಪ್ರಗತಿಯೂ ನಿರಂತರವಾಗಿ ಆಗಬೇಕು. ಹೀಗಾಗಿಯೇ ಸುಸ್ಥಿರ ಅಭಿವೃದ್ಧಿ ಈ ಹೊತ್ತಿನ ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿಂದು ನಡೆದ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರಕೃತಿ ನಮಗೆ ಬಹಳಷ್ಟು ನೀಡಿದೆ. ನೈಸರ್ಗಿಕ ಸಂಪನ್ಮೂಲಗಳಿಲ್ಲದೆ ಯಾವುದೇ ವ್ಯಕ್ತಿ ಅಥವಾ ಯಾವುದೇ ಉದ್ಯಮ ಬೆಳೆಯಲು ಸಾಧ್ಯವಿಲ್ಲ. ನಮ್ಮ ಬೆಳವಣಿಗೆಗೆ ತುಂಬಾ ಕೊಡುಗೆ ನೀಡಿದ ಪ್ರಕೃತಿಗೆ ನಾವು ಏನನ್ನಾದರೂ ನೀಡಬೇಕು, ಹೀಗಾಗಿ ಮಾಲಿನ್ಯವನ್ನು ಸಾಧ್ಯವಾದಷ್ಟು ತಡೆಗಟ್ಟಲು ಸ್ವಯಂಪ್ರೇರಣೆಯಿಂದ ಪ್ರಯತ್ನಿಸಿ ಮತ್ತು ಉತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಿ ಎಂದು ಉದ್ಯಮಿಗಳಿಗೆ ಮನವಿ ಮಾಡಿದರು.
ಅನೇಕ ಕೈಗಾರಿಕೆಗಳು ಭಾರಿ ಪ್ರಮಾಣದ ಮಾಲಿನ್ಯವನ್ನು ಹೊರಸೂಸುತ್ತಿವೆ. ಗಗನಚುಂಬಿ ಕಟ್ಟಡಗಳು ತ್ಯಾಜ್ಯ ಜಲ ಸಂಸ್ಕರಿಸದೆ ತ್ಯಾಜ್ಯ ನೀರನ್ನು (ಬೂದು ನೀರು) ಜಲಮೂಲಗಳಿಗೆ ಬಿಡುತ್ತಿವೆ. ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯವು ಅನೇಕ ಕೈಗಾರಿಕೆಗಳು ಮತ್ತು ವಾಹನಗಳಿಂದ ಉಂಟಾಗುತ್ತಿದೆ. ಪರಿಣಾಮವಾಗಿ, ವಾತಾವರಣದಲ್ಲಿ ಹಸಿರುಮನೆ ಅನಿಲಗಳು ಹೆಚ್ಚುತ್ತಿವೆ, ಇದು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಗೆ ಕಾರಣವಾಗಿದೆ. ಹೀಗಾಗಿ ಜನರೂ ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು ಎಂದರು.
ಪ್ರತಿಯೊಂದು ಸಂಸ್ಥೆಗೆ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಇರುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ನಿಧಿಯೂ ಇದೆ. ಈ ನಿಧಿಯಿಂದ ನೀವು ಪರಿಸರವನ್ನು ಉಳಿಸಲು ಪ್ರಯತ್ನಿಸಬಹುದು ಎಂದು ಮನವಿ ಮಾಡಿದರು.
ಎಲ್ಲ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ಅವರು, ಇಂದು 50 ಉನ್ನತ ತೆರಿಗೆ ಪಾವತಿದಾರರು ಪ್ರಶಸ್ತಿಗಳನ್ನು ಸ್ವೀಕರಿಸುತ್ತಿದ್ದಾರೆ. ತೆರಿಗೆ ಪಾವತಿದಾರರು ರಾಷ್ಟ್ರದ ನಿಜವಾದ ನಿರ್ಮಾತೃಗಳು. ಅವರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ನಮ್ಮ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ ಎಂದರು.
ಟಾಪ್ 50 ಉದ್ಯೋಗ ಸೃಷ್ಟಿಕರ್ತರಿಗೂ ಪ್ರಶಸ್ತಿ ನೀಡಲಾಗಿದ್ದು, ಪ್ರಸಕ್ತ ಸನ್ನಿವೇಶದಲ್ಲಿ ಉದ್ಯೋಗ ಸೃಷ್ಟಿ ಬಹಳ ಮುಖ್ಯವಾಗಿದೆ. ಏಕೆಂದರೆ ಭಾರತವು ಯುವಜನರ ದೇಶವಾಗಿದೆ. ಇದು “ನಮ್ಮ ಯುವಕರು ಯಾರೂ ನಿಷ್ಪ್ರಯೋಜಕರಲ್ಲ. ಆದರೆ ನಿರುದ್ಯೋಗದಿಂದಾಗಿ ಅವರ ಪ್ರತಿಭೆಯ ಪೂರ್ಣ ಬಳಕೆ ಆಗುತ್ತಿಲ್ಲ” ಎಂದು ಅವರು ಹೇಳಿದರು. ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಯುವ ಶಕ್ತಿಗೆ ಅವಕಾಶಗಳನ್ನು ಒದಗಿಸಿದ ಉದ್ಯೋಗ ಸೃಷ್ಟಿಕರ್ತರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಈ ಶೃಂಗಸಭೆಯು ಉನ್ನತ ವ್ಯಾಪಾರ ನಾಯಕರ ಅನುಭವದಿಂದ ಪ್ರಯೋಜನ ಪಡೆಯಲಿ ಎಂದ ಈಶ್ವರ ಖಂಡ್ರೆ ಅವರು, ವಿಶ್ವ ಪರಿಸರ ದಿನವನ್ನು ಕೇವಲ ಒಂದು ದಿನ ಆಚರಿಸುವ ಬದಲು ಅದನ್ನು ನಮ್ಮ ಜೀವನದ ಒಂದು ಭಾಗವಾಗಿ ಮಾಡಿಕೊಳ್ಳಬೇಕು ಎಂದರು.
ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಯು ಆರಾಮವಾಗಿ ಉಸಿರಾಡಲು ಕನಿಷ್ಠ 7 ಮರಗಳನ್ನು ಹೊಂದಿರಬೇಕು. ಆದರೆ ಇಂದು ಏಳು ಜನರಿಗೆ ಒಂದೇ ಒಂದು ಮರವಿಲ್ಲದ ಪರಿಸ್ಥಿತಿ ಇದೆ. ಹೀಗಾಗಿ, ಉದ್ಯಮಗಳು ತಮ್ಮ ಸಿಎಸ್ಆರ್ ನಿಧಿ ಬಳಸಿ, ಉದ್ದಿಮೆದಾರರು ಅರಣ್ಯ ಇಲಾಖೆ, ಖಾಸಗಿ ನರ್ಸರಿಗಳಿಂದ 6-8 ಅಡಿ ಎತ್ತರದ ಸಸಿಗಳನ್ನು ಖರೀದಿಸಿ, ಪ್ರತಿ ತಿಂಗಳ ಒಂದು ಶನಿವಾರ ತಮ್ಮ ಸಂಸ್ಥೆಯ ಸುತ್ತಮುತ್ತಲ ರಸ್ತೆಯ ಬದಿಯಲ್ಲಿ ಕನಿಷ್ಠ 10 ಸಸಿಗಳನ್ನು ನೆಟ್ಟು, 2-3 ವರ್ಷಗಳವರೆಗೆ ಅದನ್ನು ಪೋಷಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ನಮಗೆಲ್ಲರಿಗೂ ಇರುವುದು ಇದೊಂದೇ ಭೂಮಿ ಇದು. ಆದ್ದರಿಂದ, ಈ ಭೂಮಿಯನ್ನು ರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದರು.
ಉದ್ಯಾನ ನಗರಿ, ಹವಾನಿಯಂತ್ರಿತ ನಗರ ಎಂದು ಕರೆಯಲಾಗುತ್ತಿದ್ದ ಬೆಂಗಳೂರಿನ ಖ್ಯಾತಿ ಉಳಿಸಬೇಕು ಎಂದು ಕರೆ ನೀಡಿದರು.