ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ರಿಯಾ ಚಕ್ರವರ್ತಿಗೆ ಕ್ಷಮೆಯಾಚಿಸಬೇಕು ಎಂದು ಬಾಲಿವುಡ್ ನಟಿ ದಿಯಾ ಮಿರ್ಜಾ ಆಗ್ರಹಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಸಂಬಂಧ ಮಾಧ್ಯಮಗಳು ರಿಯಾ ಚಕ್ರವರ್ತಿಗೆ ತೀವ್ರ ನೋವು ಮತ್ತು ಕಿರುಕುಳ ನೀಡಿವೆ ಎಂದು ದಿಯಾ ಮಿರ್ಜಾ ಅವರು ತಮ್ಮ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
‘ನೀವು (ಮಾಧ್ಯಮದವರು) ಕೇವಲ ಟಿಆರ್‌ಪಿ ಗಳಿಸುವ ಉದ್ದೇಶದಿಂದ ರಿಯಾಗೆ ತೀವ್ರ ನೋವು ಮತ್ತು ಕಿರುಕುಳ ನೀಡಿದ್ದೀರಿ. ನೀವು ಮಾಡಬಹುದಾದ ಕನಿಷ್ಠ ಕೆಲಸ ಎಂದರೆ ರಿಯಾಗೆ ಕ್ಷಮೆಯಾಚಿಸುವುದಾಗಿದೆ’ ಎಂದು ದಿಯಾ ಹೇಳಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎರಡು ಪ್ರತ್ಯೇಕ ಮುಕ್ತಾಯ ವರದಿಗಳನ್ನು ಸಲ್ಲಿಸಿದೆ.ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ಅರೋಪಿಸಿ ನಟನ ತಂದೆ ಕೆ.ಕೆ.ಸಿಂಗ್ ನೀಡಿದ ದೂರು ಮತ್ತು ಸುಶಾಂತ್ ಗೆಳತಿ, ನಟಿ ರಿಯಾ ಚಕ್ರವರ್ತಿ ಅವರು ಸುಶಾಂತ್ ಸಹೋದರಿಯರ ವಿರುದ್ಧ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಸಿಬಿಐ ಶನಿವಾರ ಈ ವರದಿ ಸಲ್ಲಿಸಿದೆ.
ಕೆ.ಕೆ. ಸಿಂಗ್ ಅವರ ದೂರಿನ ಕುರಿತ ಮುಕ್ತಾಯ ವರದಿಯನ್ನು ಪಟ್ನಾದ ವಿಶೇಷ ನ್ಯಾಯಾಲಯಕ್ಕೂ, ಎರಡನೇ ಪ್ರಕರಣದ ವರದಿಯನ್ನು ಮುಂಬೈನ ವಿಶೇಷ ನ್ಯಾಯಾಲಯಕ್ಕೂ ಸಲ್ಲಿಸಲಾಗಿದೆ.
ವರದಿಯನ್ನು ಸ್ವೀಕರಿಸಬೇಕೆ ಅಥವಾ ಹೆಚ್ಚಿನ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಬೇಕೆ ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಿಯಾ ವಕೀಲರಾದ ಸತೀಶ್ ಮಾನೇಶಿಂದೆ ಅವರು ಮುಕ್ತಾಯ ವರದಿಯನ್ನು ಶ್ಲಾಘಿಸಿದ್ದು, ‘ಪ್ರಕರಣದ ಪ್ರತಿಯೊಂದು ಅಂಶವನ್ನು ಎಲ್ಲ ಆಯಾಮಗಳಿಂದಲೂ ಸಂಪೂರ್ಣವಾಗಿ ತನಿಖೆ ಮಾಡಿದ್ದಕ್ಕೆ‘ ಸಿಬಿಐಗೆ ಧನ್ಯವಾದ ಸಲ್ಲಿಸಿದ್ದಾರೆ.
ಸುಶಾಂತ್ ಸಿಂಗ್, 2020ರ ಜೂನ್ 14ರಂದು ಬಾಂದ್ರಾದ ಉಪನಗರ ದಲ್ಲಿನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್ ಆತ್ಮಹತ್ಯೆಗೆ ರಿಯಾ ಪ್ರಚೋದನೆ ನೀಡಿದ್ದಾರೆ ಮತ್ತು ನಟನ ಖಾತೆಯಿಂದ ₹15 ಕೋಟಿ ಮೊತ್ತವನ್ನು ಬೇರೆ ಖಾತೆಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಕೆ.ಕೆ.ಸಿಂಗ್ ಪಟ್ನಾ ಪೊಲೀಸರಿಗೆ ದೂರು ನೀಡಿದ್ದರು.