Home ಟಾಪ್ ಸುದ್ದಿಗಳು ಸುಳ್ಳಿನ ಮೂಲಕ ಡಿಕೆಶಿ ಹೆಸರಿಗೆ ಮಸಿ ಬಳಿಯಲು ಹೊರಟ ಸುರೇಶ್ ಕುಮಾರ್: ರಮೇಶ್ ಬಾಬು ಕಿಡಿ

ಸುಳ್ಳಿನ ಮೂಲಕ ಡಿಕೆಶಿ ಹೆಸರಿಗೆ ಮಸಿ ಬಳಿಯಲು ಹೊರಟ ಸುರೇಶ್ ಕುಮಾರ್: ರಮೇಶ್ ಬಾಬು ಕಿಡಿ

ಬೆಂಗಳೂರು: ವಕೀಲರ ಸಂಘದ ಹೆಸರಿನಲ್ಲಿ ನಕಲಿ ಆಹ್ವಾನ ಪತ್ರಿಕೆಯನ್ನು ಸೃಷ್ಟಿಸಿರುವ ಮಾಜಿ ಸಚಿವ ಸುರೇಶ್ ಕುಮಾರ್ ವಿರುದ್ಧ ಸಂಘವು ಕಾನೂನು ಕ್ರಮ ಜರುಗಿಸಬೇಕೆಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಒತ್ತಾಯಿಸಿದ್ದಾರೆ.

ಮಾಜಿ ಸಚಿವ, ರಾಜಾಜಿನಗರದ ಶಾಸಕ, ಬಿಜೆಪಿ ಮುಖಂಡ ಕರ್ನಾಟಕ ಲೋಕಸೇವಾ ಆಯೋಗದ ತಾತ್ಕಾಲಿಕ ಗೇಟ್ ಕೀಪರ್ ಸುರೇಶ್ ಕುಮಾರ್ ಸುಳ್ಳು ವದಂತಿ ಹಬ್ಬಿಸುವ ನಾಯಕರಾಗಿ ಹೊರಹೊಮ್ಮಿರುವುದು ಅವರ ವ್ಯಕ್ತಿತ್ವದ ಇನ್ನೊಂದು ಮುಖವಾಗಿರುತ್ತದೆ ಎಂದು ಮಾಜಿ ಎಂಎಲ್‌ಸಿಯೂ ಆದ ರಮೇಶ್ ಬಾಬು ಕಿಡಿಗಾರಿದ್ದಾರೆ.

ಕ್ವೀನ್ಸ್‍ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮಗೆ ಬೇಕಾದಾಗ ತಾವು ವಕೀಲರೆಂದು ಹೇಳಿಕೊಳ್ಳುವ ಮತ್ತು ವಕೀಲ ವೃತ್ತಿಯ ಹೆಸರಿನಲ್ಲಿ ಮನ್ನಣೆಗಾಗಿ ಹವಳಿಸುವ ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ರವರು ಬೆಂಗಳೂರು ವಕೀಲರ ಸಂಘದ ಹೆಸರಿನಲ್ಲಿ ನಕಲಿ ಆಹ್ವಾನ ಪತ್ರಿಕೆಯನ್ನು ಸೃಷ್ಟಿ ಮಾಡಿ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ರವರ ಹೆಸರಿಗೆ ಮಸಿ ಬಳಿಯಲು ಹೊರಟಿರಿವುದು ಅವರ ಹಿಟ್ ಅಂಡ್ ರನ್ ಮನಸ್ಥಿತಿಯ ಇನ್ನೊಂದು ಮುಖವಾಗಿರುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು ವಕೀಲರ ಸಂಘವು ತನ್ನ ಪರಂಪರೆಗೆ ಅನುಗುಣವಾಗಿ ಸುಪ್ರೀಂ ಕೋರ್ಟ್ ನ್ಯಾಯಧೀಶರಾಗಿ ಪದೋನ್ನತಿ ಪಡೆದ ನ್ಯಾಯಮೂರ್ತಿ ಗೌರವಾನ್ವಿತ ಪ್ರಸನ್ನ ವರಲೇ ಮತ್ತು ಗೌರವಾನ್ವಿತ ಮುಖ್ಯ ನ್ಯಾಯಾಧೀಶರಾದ ದಿನೇಶ್ ಕುಮಾರ್ ರವರಿಗೆ ಗೌರವ ಸಮಾರಂಭವನ್ನು ಹಮ್ಮಿಕೊಂಡಿರುತ್ತದೆ. ಸಮಯದ ಅಭಾವದಿಂದ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಯದ ಕಾರಣಕ್ಕಾಗಿ ಬೆಂಗಳೂರು ವಕೀಲರ ಸಂಘ ಮಾನ್ಯ ಮುಖ್ಯ ಮಂತ್ರಿಗಳಿಗೆ ಅಥವಾ ಉಪಮಂಖ್ಯಮಂತ್ರಿಗಳಿಗೆ ಸಂಪರ್ಕ ಮಾಡಿರುವುದಿಲ್ಲ ಮತ್ತು ಆಹ್ವಾನವನ್ನು ತಲುಪಿಸಿರುವುದಿಲ್ಲ. ಆದರೂ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯ ಮಂತ್ರಿಗಳು ಸಮಾರಂಭದ ಯಶಸ್ವಿಗೆ ಸಂಪೂರ್ಣ ಸಹಕಾರವನ್ನು ನೀಡಿರುತ್ತಾರೆ ಎಂದು ರಮೇಶ್ ಬಾಬು ಮಾಹಿತಿ ನೀಡಿದ್ದಾರೆ

ಸಕ್ರಿಯ ರಾಜಕಾರಣದಲ್ಲಿ ಕಳೆದು ಹೋಗಿರುವ ಮಾಜಿ ಸಚಿವ ಸುರೇಶ್ ಕುಮಾರ್ ಆಗಾಗ ಪ್ರಚಾರಕ್ಕಾಗಿ ಚೇಷ್ಟೆಗಳನ್ನು ಮಾಡುತ್ತಾರೆ. ಅದರ ಭಾಗವಾಗಿ ನ್ಯಾಯಮೂರ್ತಿಗಳ ಕಾರ್ಯಕ್ರಮಕ್ಕೆ ತಾವೇ ಒಂದು ಆಹ್ವಾನ ಪತ್ರಿಕೆಯನ್ನು ಸೃಷ್ಟಿ ಮಾಡಿ ಅನಾವಶ್ಯಕವಾಗಿ ಉಪಮುಖ್ಯಮಂತ್ರಿಗಳ ಹೆಸರನ್ನು ಎಳೆದು ತಂದು ಪ್ರಚಾರ ಪಡೆಯುವ ಹುನ್ನಾರಕ್ಕೆ ಮುಂದಾಗಿದ್ದಾರೆ. ತಮ್ಮ ಮನೆಯ ಮುಂದೆ ಪ್ರತಿಭಟನೆ ನಡೆಸಿದ ಶಿಕ್ಷಕರನ್ನು ಜೈಲಿಗೆ ಹಾಕಿಸುವ ಸುರೇಶ್ ಕುಮಾರ್ , ಪ್ರಚಾರಕ್ಕಾಗಿ ಮನೆಯ ಮುಂದೆ ಕಸ ಹೊಡೆಯುವ ನಾಟಕವಾಡುತ್ತಾರೆ. ಅಧಿಕಾರ ಇದ್ದಾಗ ಒಬ್ಬರಿಗೂ ಉದ್ಯೋಗ ಕೊಡಿಸದ ಇವರು ಪ್ರಚಾರಕ್ಕಾಗಿ ಕರ್ನಾಟಕ ಲೋಕ ಸೇವಾ ಆಯೋಗದ ತಾತ್ಕಾಲಿಕ ವಾಚ್ ಮೆನ್ ಕೆಲಸವನ್ನು ಮಾಡುತ್ತಾರೆ. ಪ್ರಚಾರಕ್ಕಾಗಿ ಆಗಾಗ ಇಂತಹ ವೇಷಗಳನ್ನು ಧರಿಸುವ ಸುರೇಶ್ ಕುಮಾರ್ ರವರು ಉಪ ಮುಖ್ಯಮಂತ್ರಿಗಳಿಗೆ ಕಳಂಕ ತರುವ ಉದ್ದೇಶದಿಂದ ವಕೀಲರ ಸಂಘದ ಹೆಸರಿನಲ್ಲಿ ನಕಲಿ ಆಹ್ವಾನ ಪತ್ರಿಕೆಯನ್ನು ಸೃಷ್ಟಿ ಮಾಡಿದ್ದು, ಬೆಂಗಳೂರು ವಕೀಲರ ಸಂಘ ತಾವು ಇಲ್ಲಿಯವರೆಗೆ ಕಾರ್ಯಕ್ರಮದ ಯಾವುದೇ ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡಿಲ್ಲವೆಂದು ಸ್ಪಷ್ಟನೆ ನೀಡಿರುತ್ತಾರೆ ಎಂದು ಕಪಿಸಿಸಿ ವಕ್ತಾರ ಹೇಳಿದ್ದಾರೆ.

ಬೆಂಗಳೂರು ವಕೀಲರ ಸಂಘವು ಯಾವುದೇ ರಾಜಕೀಯ ಪಕ್ಷದ ಸಂಘಟನೆ ಅಲ್ಲ. ಆದ ಕಾರಣ ವಕೀಲರ ಸಂಘದ ಹೆಸರಿನಲ್ಲಿ ಅಪಪ್ರಚಾರ ಮಾಡಿರುವ ಮಾಜಿ ಕಾನೂನು ಸಚಿವ ಬಿಜೆಪಿಯ ಸುರೇಶ್ ಕುಮಾರ್ ರವರಿಗೆ ಬೆಂಗಳೂರು ವಕೀಲರ ಸಂಘ ನೋಟೀಸ್ ನೀಡಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇನೆ. ಮೌಲ್ಯಗಳ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಸುರೇಶ್ ಕುಮಾರ್ ರವರು ಈ ಪ್ರಕರಣದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸುತ್ತೇನೆ. ಇಲ್ಲದೆ ಹೋದರೆ “ಮೂರನ್ನು ಬಿಟ್ಟವರು ಊರಿಗೆ ದೊಡ್ಡವರು” ಎನ್ನುವ ಗುಂಪಿಗೆ ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ರವರು ಸೇರಿಕೊಳ್ಳುತ್ತಾರೆ ಎಂದು ಅವರು ಖಾರವಾಗಿ ಹೇಳಿದ್ದಾರೆ.

Join Whatsapp
Exit mobile version