ನವದೆಹಲಿ: ಇತ್ತೀಚೆಗೆ ಹಿಂದೂ ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮತ್ತು ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಮುಸ್ಲಿಮರ ನರಮೇಧ ನಡೆಸುವಂತೆ ಪ್ರಮಾಣ ಮಾಡಿದ ಬಲಪಂಥೀಯ ಪತ್ರಕರ್ತ ಸುರೇಶ್ ಚವಾಂಕೆ ವಿರುದ್ಧ ಪೊಲೀಸರು ಕೈಗೊಂಡ ಕಾನೂನು ಕ್ರಮಗಳ ಕುರಿತು ವರದಿ ನೀಡುವಂತೆ ದೆಹಲಿ ಕೋರ್ಟ್ ಸೂಚಿಸಿದೆ.
ಸೈಯ್ಯದ್ ಖಾಸಿಮ್ ರಸೂಲ್ ಇಲ್ಯಾಸ್ ಎಂಬವರು ‘ಸುದರ್ಶನ್’ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಚವಾಂಕೆ ಎಂಬಾತನ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 19 ರಂದು ಹಿಂದುತ್ವ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಚವಾಂಕೆ ಎಂಬಾತ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಮುಸ್ಲಿಮರನ್ನು ಸಾಮೂಹಿಕ ಹತ್ಯೆ ನಡೆಸುವಂತೆ ಸಂಘಪರಿವಾರದ ಕಾರ್ಯಕರ್ತರಿಗೆ ಪ್ರಮಾಣ ವಚನ ಬೋಧಿಸಿದ್ದನು.
ಘಟನೆಗೆ ಸಂಬಂಧಿಸಿದಂತೆ ಡಿಸೆಂಬರ್ 25 ರಂದು ಗೋವಿಂದ್ ಪುರಿ ಪೊಲೀಸ್ ಠಾಣೆಯಲ್ಲಿ ಸುರೇಶ್ ಚವಾಂಕೆ ವಿರುದ್ಧ ಐಪಿಸಿ ಸೆಕ್ಷನ್ 153A, 153B, 295A, 298, ಮತ್ತು 504, 505(2) ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರ ಹೊರತಾಗಿಯೂ ಆತನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಸಂಸ್ಥೆ ಆರೋಪಿಸಿತ್ತು.
ಸಾಕೇತ್ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಿತೇಂದ್ರ ಪ್ರತಾಪ್ ಸಿಂಗ್ ಅವರು ಮುಂದಿನ ವಿಚಾರಣೆಯನ್ನು ಮಾರ್ಚ್ 15 ಕ್ಕೆ ಮುಂದೂಡಿದ್ದಾರೆ.