ನವದೆಹಲಿ: ಕೋವಿಡ್ -19 ಸಂಕಷ್ಟದ ನಡುವೆಯೇ ಮುಂದಿನ ವಾರದಿಂದ ಆರಂಭವಾಗುವ ಕನ್ವರ್ ಯಾತ್ರೆಗೆ ಅವಕಾಶ ನೀಡುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟ್ ಈ ಯಾತ್ರೆಯ ಕುರಿತು ಯುಪಿ ಮತ್ತು ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿ ಬುಧವಾರ ನೋಟಿಸ್ ಜಾರಿ ಮಾಡಿದೆ. ಮಾತ್ರವಲ್ಲ ಈ ಕುರಿತ ವಿಚಾರಣೆಯು ಸುಪ್ರೀಮ್ ನಲ್ಲಿ ಶುಕ್ರವಾರ ನಡೆಯಲಿದೆ.
ಜುಲೈ 25 ರಿಂದ ಕನಿಷ್ಠ ಜನರನ್ನು ಸೇರಿಸಿಕೊಂಡು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ನಡೆಸಬಹುದೆಂದು ಮಂಗಳವಾರ ಯುಪಿ ಸರ್ಕಾರ ತಿಳಿಸಿದೆ. ಮಾತ್ರವಲ್ಲದೇ ಭಾಗವಹಿಸುವ ಯಾತ್ರಾರ್ಥಿಗಳಿಗೆ ಅಗತ್ಯವಿದ್ದಲ್ಲಿ ಕೋವಿಡ್ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಬಹುದೆಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ “ ಕೋವಿಡ್ ಪ್ರೋಟೋಕಾಲ್ ಅನ್ನು ಸಂಪೂರ್ಣವಾಗಿ ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಕನ್ವರ್ ಯಾತ್ರೆಯ ಸುರಕ್ಷಿತ ಮತ್ತು ಯಶಸ್ವಿ ಕಾರ್ಯಾಚರಣೆಯ ಬಗ್ಗೆ ಯಾವುದೇ ಹಿಂಜರಿಕೆ ಇರಬಾರದೆಂದು ತಿಳಿಸಿದರು.
ಈ ಹಿಂದೆ ಕುಂಭಮೇಳ ನಡೆಸಿದ ನಿಟ್ಟಿನಲ್ಲಿ ಉತ್ತರಾಖಂಡ ಸರ್ಕಾರ ಸಾರ್ವಜನಿಕವಾಗಿ ಭಾರೀ ಟೀಕೆಗೊಳಗಾಗಿತ್ತು. ಮಾತ್ರವಲ್ಲ ಕೇಂದ್ರ ಆರೋಗ್ಯ ಇಲಾಖೆ ಯಾತ್ರೆಯನ್ನು ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ಪತ್ರ ಬರೆದಿತ್ತು. ಇದಾದ ಗಂಟೆಗಳ ನಂತರ ಉತ್ತರಾಖಂಡ ಸರ್ಕಾರವು ತನ್ನ ವ್ಯಾಪ್ತಿಯಲ್ಲಿ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿದೆ. ಮಾತ್ರವಲ್ಲದೆ ತನ್ನ ನಿರ್ಧಾರವನ್ನು ಪ್ರಕಟಿಸಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಅವರು ಹರಿದ್ವಾರವನ್ನು ಸಾಂಕ್ರಾಮಿಕ ಕೇಂದ್ರವನ್ನಾಗಿ ಮಾಡಲು ನಾವು ಬಯಸುವುದಿಲ್ಲ. “ ದೇವರುಗಳು ಜನರು ಸಾಯುವುದನ್ನು ಬಯಸುವುದಿಲ್ಲವೆಂದು” ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಪ್ರತಿವರ್ಷ, ವಿವಿಧ ಉತ್ತರದ ರಾಜ್ಯಗಳಿಂದ ಅಂದಾಜು 30 ಮಿಲಿಯನ್ ಕನ್ವರಿಯರು (ಶಿವನ ಭಕ್ತರು) ಕಾಲ್ನಡಿಗೆಯಲ್ಲಿ ಅಥವಾ ಇತರ ವಿಧಾನಗಳಿಂದ ಹರಿದ್ವಾರದಲ್ಲಿರುವ ಗಂಗಾ ನದಿಯಿಂದ ತಮ್ಮ ಪ್ರದೇಶಗಳಲ್ಲಿನ ಶಿವ ದೇವಾಲಯಗಳಲ್ಲಿ ಅರ್ಪಿಸಲು ನೀರು ಸಂಗ್ರಹಿಸುವುದು ವಾಡಿಕೆ. ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಉತ್ತಾರಖಂಡ ಸರ್ಕಾರ ಯಾತ್ರೆ ರದ್ದುಗೊಳಿಸಲು ತೀರ್ಮಾನಿಸಿದ್ದಾರೂ ಯುಪಿ ಸರ್ಕಾರ ಈ ಯಾತ್ರೆ ನಡೆಸಲು ಉತ್ಸುಕ ವಾಗಿದೆ. ಈ ನಿಟ್ಟಿನಲ್ಲಿ ಸುಪ್ರೀಮ್ ಕೋರ್ಟ್ ಸಕಾಲದಲ್ಲಿ ಮಧ್ಯಪ್ರವೇಶ ಮಾಡಿ ಯುಪಿ ಸರ್ಕಾರಕ್ಕೆ ನೋಟಿಸ್ ನೀಡಿದೆ.