ಸುಪ್ರೀಂ ಕೋರ್ಟ್ ನ ಅವಲೋಕನವು ಈಡಿ ದುರ್ಬಳಕೆಯ ಸಾಕ್ಷ್ಯಾಧಾರವಾಗಿದೆ : ಪಾಪ್ಯುಲರ್ ಫ್ರಂಟ್

Prasthutha|

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ(ಈಡಿ)ದ ವಿರುದ್ಧ ಸುಪ್ರೀಂ ಕೋರ್ಟ್ ನ ನಿಲುವು ಅಧಿಕಾರದಲ್ಲಿರುವವರು ಏಜೆನ್ಸಿಯನ್ನು ದುರ್ಬಳಕೆ ಮಾಡುತ್ತಿರುವುದರ ಸಾಕ್ಷ್ಯಾಧಾರವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

- Advertisement -

ಇತ್ತೀಚಿಗೆ ಸುಪ್ರೀಂ ಕೋರ್ಟ್, ಕ್ವಿಂಟ್ ಸಂಸ್ಥಾಪಕ ರಾಘವ್ ಬಹ್ಲ್ ವಿರುದ್ಧ ಯಾವುದೇ ಕಠಿಣ ಕ್ರಮಕೈಗೊಳ್ಳದಂತೆ ಆದೇಶಿಸಿತ್ತು. ಇದೇ ರೀತಿ ಅವರಿಗೆ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಮಧ್ಯಂತರ ರಕ್ಷಣೆಯನ್ನು ಕಲ್ಪಿಸಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಸಣ್ಣಪುಟ್ಟ ಪ್ರಕರಣದಲ್ಲೂ ಅಕ್ರಮ ಹಣ ವಹಿವಾಟು ತಡೆ ಕಾಯ್ದೆ (ಪಿ.ಎಂ.ಎಲ್.ಎ) ಪ್ರಕಾರ ಈಡಿಯನ್ನು ಅವ್ಯವಸ್ಥಿತವಾಗಿ ಬಳಸಿರುವುದನ್ನೂ ಕಟುವಾಗಿ ಟೀಕಿಸಿತ್ತು.

ಇವೆರಡೂ ಪ್ರಕರಣಗಳು ದೇಶದಲ್ಲಿ ತೀವ್ರವಾಗಿ ಚಿಂತೆಗೀಡು ಮಾಡುತ್ತಿರುವ ಪ್ರವೃತ್ತಿಯ ಕಡೆಗೆ ಬೊಟ್ಟು ಮಾಡುತ್ತಿದೆ. ಪಿ.ಎಂ.ಎ.ಎಲ್. ಕಾನೂನು, ಯುಎಪಿಎಯಂತೆ ರಾಜಕೀಯ ವಿರೋಧಿಗಳನ್ನು ಕಿರುಕುಳಕ್ಕೊಳಪಡಿಸುವ ಮತ್ತು ಅಸಹಮತಿಯ ಧ್ವನಿಗಳನ್ನು ಮೌನವಾಗಿಸುವ ಬಿಜೆಪಿ ಸರಕಾರದ ಒಂದು ಅಸ್ತ್ರವಾಗಿಬಿಟ್ಟಿದೆ.

- Advertisement -

ತನಿಖೆಯ ಹೆಸರಿನಲ್ಲಿ ಈಡಿ ಏನು ಬೇಕಾದರೂ ಮಾಡುತ್ತದೆ. ಅದು ಮೋದಿಯವರ ಟೀಕಾಕಾರರು ಮತ್ತು ಮುಸ್ಲಿಮ್ ಸಂಘಟನೆಗಳನ್ನು ಭೀತಿಪಡಿಸಲು ಹಾಗೂ ತೇಜೋವಧೆ ನಡೆಸುವುದರ ಹೊರತಾಗಿ ಏನೂ ಅಲ್ಲ.

ಆದರೆ, ಅದೇ ವೇಳೆ ಬಿಜೆಪಿ ನಾಯಕರು ಮತ್ತು ಮೋದಿಯವರ ನಿಕಟವರ್ತಿಗಳ ಹಗರಣಗಳು ಮತ್ತು ಅವರ ಮೇಲಿನ ಕಪ್ಪು ಹಣದ ಆರೋಪಗಳ ಕುರಿತಾಗಿ ತನಿಖೆ ನಡೆಸಲು ಏಜೆನ್ಸಿ ಕಿಂಚಿತ್ ಆಸಕ್ತಿ ಹೊಂದಿರುವುದು ಕಂಡು ಬರುವುದಿಲ್ಲ. ಕಳೆದ ವರ್ಷ ಬಿಜೆಪಿಯ ರಾಜ್ಯ ನಾಯಕರು 400 ಕೋಟಿ ಕಪ್ಪು ಹಣದ ವ್ಯವಹಾರದಲ್ಲಿ ಸಿಕ್ಕಿಬಿದ್ದಿದ್ದರು. ಅಚ್ಚರಿಯ ವಿಷಯವೆಂದರೆ, ಕೆಲವೇ ತಿಂಗಳುಗಳಲ್ಲಿ ಈ ಪ್ರಕರಣ ಮರೆಯಾಗಿಬಿಟ್ಟಿತು. ಈ ಎಲ್ಲಾ ವಿಚಾರಗಳೂ ಏಜೆನ್ಸಿಯ ವಿಶ್ವಾಸಾರ್ಹತೆಗೆ ಗಂಭೀರ ಹಾನಿಯನ್ನು ಉಂಟು ಮಾಡಿತು.

ಪಿ.ಎಂ.ಎ.ಎಲ್ ಕಾಯ್ದೆಯ ಪ್ರಕಾರ ಏಜೆನ್ಸಿಗೆ ಕಲ್ಪಿಸಲಾಗಿರುವ ಅಧಿಕಾರಗಳ ಬಹಿರಂಗ ದುರ್ಬಳಕೆಯು ಸ್ಪಷ್ಟವಾಗಿ ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಬೆದರಿಕೆಯಾಗಿದೆ. ಸುಪ್ರೀಂ ಕೋರ್ಟ್ ನ ಮೇಲಿನ ಅವಲೋಕನದ ಬೆಳಕಿನಲ್ಲಿ ಪಾಪ್ಯುಲರ್ ಫ್ರಂಟ್, ಏಜೆನ್ಸಿಯ ದುರ್ಬಳಕೆಯನ್ನು ತಡೆಯಲು ಈ ಕಾಯ್ದೆಯನ್ನು ರದ್ದುಪಡಿಸಬೇಕು ಅಥವಾ ಅದಕ್ಕೆ ತಿದ್ದುಪಡಿಗೊಳಿಸಬೇಕೆಂದು ಉನ್ನತ ನ್ಯಾಯಾಂಗದೊಂದಿಗೆ ಮನವಿ ಮಾಡುತ್ತದೆ.

Join Whatsapp