Home ಟಾಪ್ ಸುದ್ದಿಗಳು ರೂರ್ಕಿ ಧರ್ಮ ಸಂಸದ್ ನಲ್ಲಿ ದ್ವೇಷ ಭಾಷಣ ಮಾಡಿದರೆ ಮುಖ್ಯ ಕಾರ್ಯದರ್ಶಿಯನ್ನೇ ಹೊಣೆಯಾಗಿಸುತ್ತೇವೆ: ಸುಪ್ರೀಂಕೋರ್ಟ್ ಎಚ್ಚರಿಕೆ

ರೂರ್ಕಿ ಧರ್ಮ ಸಂಸದ್ ನಲ್ಲಿ ದ್ವೇಷ ಭಾಷಣ ಮಾಡಿದರೆ ಮುಖ್ಯ ಕಾರ್ಯದರ್ಶಿಯನ್ನೇ ಹೊಣೆಯಾಗಿಸುತ್ತೇವೆ: ಸುಪ್ರೀಂಕೋರ್ಟ್ ಎಚ್ಚರಿಕೆ

ನವದೆಹಲಿ: ರೂರ್ಕಿಯಲ್ಲಿ ನಡೆಯುವ ಧರ್ಮ ಸಂಸದ್ ನಂಥ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಕುರಿತು ನ್ಯಾಯಾಲಯದ ಆದೇಶವಿದೆ, ಅದನ್ನು ಅನುಸರಿಸಬೇಕು. ರಾಜ್ಯದ ಮುಖ್ಯ ಕಾರ್ಯದರ್ಶಿಯು ಈ ಬಗ್ಗೆ ಈ ಕೂಡಲೆ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಬೇಕು ಎಂದೂ ಸುಪ್ರೀಂಕೋರ್ಟ್ ಸೂಚಿಸಿದೆ.

“ಈಗಾಗಲೇ ಇರುವ ಮಾರ್ಗದರ್ಶಿ ಸೂತ್ರಗಳನ್ನು ಮಾತ್ರ ನೀವು ಅನುಸರಿಸಬೇಕು. ನೀವದನ್ನು ಪಾಲಿಸುತ್ತೀರೋ ಇಲ್ಲವೋ ಇಲ್ಲಿ ನಮಗೆ ನೀವು ಉತ್ತರಿಸಬೇಕಾಗುತ್ತದೆ” ಎಂದು ಜಸ್ಟಿಸ್ ಎ. ಎಂ. ಖಾನ್ವಿಲ್ಕರ್ ನೇತೃತ್ವದ ನ್ಯಾಯ ಪೀಠ ಹೇಳಿತು.

ಜಸ್ಟಿಸ್ ಗಳಾದ ಅಭಯ್ ಎಸ್. ಓಕಾ, ಸಿ. ಟಿ. ರವಿಕುಮಾರ್ ಅವರನ್ನು ಒಳಗೊಂಡ ಪೀಠವು ಮಾರ್ಗದರ್ಶಿ ಸೂತ್ರ ಪಾಲಿಸಲು ಒತ್ತಿ ಹೇಳಿತು.

“ಇವೆಲ್ಲದರ ನಡುವೆ ಇನ್ನೇನಾದರೂ ನಡೆಯುತ್ತದಾದರೆ ಅದನ್ನು ಸರಿಪಡಿಸುವ ಜವಾಬ್ದಾರಿಯೂ ನಿಮ್ಮದಾಗಿದೆ.” ಎಂದೂ ನ್ಯಾಯಪೀಠ ಹೇಳಿದೆ.

ಎಲ್ಲ ಬಗೆಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಿಂದಿನ ಘಟನೆಗಳ ಮೇಲೆ ತನಿಖೆ ನಡೆಸಲಾಗಿದೆ ಎಂದು ರಾಜ್ಯ ಸರಕಾರವು ಈ ಸಂದರ್ಭದಲ್ಲಿ ಹೇಳಿತು.

“ಬರೇ ತನಿಖೆ ಸಾಲದು; ನೀವು ಇಂಥ ಘಟನೆಗಳು ನಡೆಯದಂತೆ ತಡೆಯಬೇಕು.” ಎಂದು ಜಸ್ಟಿಸ್ ಖಾನ್ವಿಲ್ಕರ್ ಅವರು ರಾಜ್ಯ ಸರಕಾರದ ವಕೀಲರಿಗೆ ಸೂಚಿಸಿದರು. ಏನಾದರೂ ಅಹಿತಕರ ಘಟನೆ ನಡೆದರೆ ರಾಜ್ಯದ ಮುಖ್ಯ ಕಾರ್ಯದರ್ಶಿಯು ಇಲ್ಲಿ ಖುದ್ದು ಹಾಜರಿರತಕ್ಕದ್ದು ಎಂದು ಕೂಡ ಸುಪ್ರೀಂ ಕೋರ್ಟು ಎಚ್ಚರಿಸಿತು.

ಹಿಮಾಚಲ ಪ್ರದೇಶದಲ್ಲಿ ಹಿಂದೆ ನಡೆದ ಧರ್ಮ ಸಂಸದ್ ಬಗೆಗಿನ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಅಂದಿನ ತಪ್ಪುಗಳ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದರ ಬಗೆಗೆ ಅಫಿಡವಿಟ್ ಸಲ್ಲಿಸುವಂತೆ ಹಾಜರಾದ ರಾಜ್ಯದ ವಕೀಲರಿಗೆ ಸೂಚಿಸಿತು.

ಹಿಮಾಚಲ ಪ್ರದೇಶದ ಪರ ಹಾಜರಾದ ವಕೀಲರು, ಅಂತಾದ್ದೇನೂ ಆಗಿಲ್ಲ ಮುಂದೆ ಆಗದು ಎಂಬುದನ್ನು ಖಾತರಿ ಪಡಿಸಲು ಪೊಲೀಸ್ ಕಾಯ್ದೆಯ 64ನೇ ವಿಧಿಯಡಿ ಸಂಬಂಧಿಸಿದವರಿಗೆ ನೋಟೀಸು ನೀಡಲಾಗಿದೆ. ಆ ಬಗೆಗೆ ವಿವರಣೆಗಳನ್ನು ಪಡೆಯಲಾಗಿದೆ. ತಕ್ಕ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರಕಾರ ತಿಳಿಸಿತು.

“ಇಂಥ ಘಟನೆಗಳು ರಾತ್ರಿ ಬೆಳಗಾಗುವುದರೊಳಗೆ ನಡೆಯುವುದಿಲ್ಲ. ಅವನ್ನೆಲ್ಲ ಮೊದಲೇ ಯೋಜಿಸಿ ಕೆಲವರ ನಡುವೆ ಘೋಷಣೆ ಮಾಡುವುದೂ ನಡೆದಿರುತ್ತದೆ. ಸ್ಥಳೀಯ ಪೊಲೀಸರು ಆಗಬಾರದ್ದು ಏನಾದರೂ ನಡೆಯುವುದಕ್ಕೆ ಮೊದಲು ಸ್ಥಳದಲ್ಲಿದ್ದು ಸರಿಪಡಿಸಬೇಕು. ಅಂಥ ಕ್ರಮ ಕೈಗೊಳ್ಳಲಾಗಿದೆಯೇ ವಿವರಿಸಿ” ಎಂದು ನ್ಯಾಯಾಧೀಶ ಖಾನ್ವಿಲ್ಕರ್ ಪ್ರಶ್ನಿಸಿದರು. ಹಿಮಾಚಲ ಪ್ರದೇಶದ ಪರ ವಕೀಲರು ವಿವರವಾದ ಅಫಿಡವಿಟ್ ಗೆ ಕಾಲಾವಕಾಶ ಪಡೆದುಕೊಂಡರು.

Join Whatsapp
Exit mobile version