Home ಟಾಪ್ ಸುದ್ದಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ಬುಧವಾರ ಎತ್ತಿ ಹಿಡಿದಿದೆ [ವಿಜಯ್ ಮದನ್‌ಲಾಲ್ ಚೌಧರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಕಾನೂನಿನ ಸಿಂಧುತ್ವ ಪ್ರಶ್ನಿಸಿದ್ದ 241 ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ಅವರ ಪೀಠ ಈ ತೀರ್ಪು ಪ್ರಕಟಿಸಿದೆ.

ಕಾಯಿದೆಯ ಸೆಕ್ಷನ್ 3 (ಅಕ್ರಮ ಹಣ ವರ್ಗಾವಣೆ ವ್ಯಾಖ್ಯಾನ), 5 (ಆಸ್ತಿ ಮುಟ್ಟುಗೋಲು), 8(4) [ಮುಟ್ಟುಗೋಲಾದ ಆಸ್ತಿಯ ಸ್ವಾಧೀನ), 17 (ಶೋಧಕಾರ್ಯ ಮತ್ತು ವಶ), 18 (ವ್ಯಕ್ತಿಗಳ ಶೋಧಕಾರ್ಯ), 19 ( ಬಂಧನದ ಅಧಿಕಾರ), 24 (ಸಾಕ್ಷ್ಯಾಧಾರದ ಹಿಮ್ಮುಖ ಹೊರೆ), 44 (ವಿಶೇಷ ನ್ಯಾಯಾಲಯದಿಂದ ವಿಚಾರಣೆಗೆ ಒಳಪಡುವ ಅಪರಾಧಗಳು), 45 ಅನ್ನು (ಸಂಜ್ಞೇಯವಾಗಿರುವಂತಹ ಅಪರಾಧಗಳು, ಅಸಂಜ್ಞೇಯ ಅಪರಾಧಗಳು ಮತ್ತು ನ್ಯಾಯಾಲಯದಿಂದ ಜಾಮೀನು ಪಡೆಯಲು ವಿಧಿಸುವ ಅವಳಿ ಷರತ್ತುಗಳು) ನ್ಯಾಯಾಲಯ ಎತ್ತಿ ಹಿಡಿದಿದೆ.

ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್‌) ಆಂತರಿಕ ದಾಖಲೆಯಾಗಿರುವುದರಿಂದ ಅದನ್ನು ಎಫ್‌ಐಆರ್‌ಗೆ ಹೋಲಿಸಲಾಗದು. ಹೀಗಾಗಿ ಪಿಎಂಎಲ್‌ಎ ಅಡಿಯಲ್ಲಿ ಆರೋಪಿಗೆ ಇಸಿಐಆರ್‌ ನೀಡುವುದು ಕಡ್ಡಾಯವಲ್ಲ. ಬಂಧನದ ಸಮಯದಲ್ಲಿ ಆತನನ್ನು ಏಕೆ ಸೆರೆ ಹಿಡಿಯಲಾಗುತ್ತಿದೆ ಎಂಬ ಮಾಹಿತಿ ನೀಡಿದರೆ ಸಾಕು ಎಂದು ಕೂಡ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನಿಗದಿತ ಅಪರಾಧಗಳಿಗೆ ಅನುಗುಣವಾಗಿ ಪಿಎಂಎಲ್‌ ಕಾಯಿದೆಯಡಿ ಶಿಕ್ಷೆಯ ಪ್ರಮಾಣ ನಿಗದಿಪಡಿಸಬೇಕು ಎಂಬು ವಾದವನ್ನು ನ್ಯಾಯಾಲಯ ಸಂಪೂರ್ಣ ಆಧಾರರಹಿತ ಎಂದು ತಿರಸ್ಕರಿಸಿತು.

ಆದರೆ 2019 ರಲ್ಲಿ ಹಣಕಾಸು ಮಸೂದೆಯಾಗಿ ಕಾಯಿದೆಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಲಾಗಿದ್ದು ಆ ಕುರಿತು ಈಗಾಗಲೇ ತನ್ನ ಮುಂದಿರುವ ಪ್ರಕರಣದಲ್ಲಿ ವಿಸ್ತೃತ ಪೀಠ ನಿರ್ಧರಿಸಬೇಕಿದೆ.
ಶೋಧಕಾರ್ಯ, ಆಸ್ತಿ ಮುಟ್ಟುಗೋಲು ಹಾಗೂ ಆಸ್ತಿ ಸ್ವಾಧೀನಕ್ಕಾಗಿ ಜಾರಿ ನಿರ್ದೇಶನಾಲಯಕ್ಕೆ ನೀಡಿರುವ ವ್ಯಾಪಕ ಅಧಿಕಾರ, ನಿರಪರಾಧಿ ಎಂದು ಸಾಬೀತುಪಡಿಸಲು ಆರೋಪಿಗಳ ಮೇಲೆ ಹಿಮ್ಮುಖ ಹೊರೆ, ಸಾಕ್ಷಿಯಾಗಿ ಇ ಡಿಗೆ ನೀಡಿದ ಹೇಳಿಕೆಗಳನ್ನು ಒಪ್ಪಿಕೊಳ್ಳುವುದು, ಜಾಮೀನು ನೀಡಲು ಕಠಿಣ ಷರತ್ತುಗಳು ಸೇರಿದಂತೆ ಕಾನೂನಿನ ವಿವಿಧ ಅಂಶಗಳನ್ನು ಅರ್ಜಿದಾರರು ಪ್ರಶ್ನಿಸಿದ್ದರು.

(ಕೃಪೆ: ಬಾರ್ ಆ್ಯಂಡ್ ಬೆಂಚ್)

Join Whatsapp
Exit mobile version