ನವದೆಹಲಿ: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶಾಸನಸಭೆಯಿಂದ ಅನರ್ಹಗೊಂಡ ಅಥವಾ ರಾಜೀನಾಮೆ ನೀಡಿದ ಶಾಸಕರು ಐದು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸುವಂತೆ ಕೋರಿರುವ ಮನವಿಗೆ ಸಂಬಂಧಿಸಿದಂತೆ ತುರ್ತು ನಿರ್ದೇಶನಗಳನ್ನು ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಅವರು ಈ ಸಂಬಂಧ 2021ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು. ಆದರೆ ಇದಕ್ಕೆ ಸರ್ಕಾರದಿಂದ ಯಾವುದೇ ಉತ್ತರ ದೊರೆತಿಲ್ಲ ಎಂದು ಅರ್ಜಿದಾರರು ಈಗ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಯಾವುದೇ ಪ್ರಗತಿಯಾಗದ ಕಾರಣ ರಾಜಕೀಯ ಪಕ್ಷಗಳು ಈ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ. ವಿವಿಧ ರಾಜ್ಯಗಳಲ್ಲಿ ಚುನಾಯಿತ ಸರ್ಕಾರಗಳನ್ನು ಸತತವಾಗಿ ನಾಶಪಡಿಸುತ್ತಿವೆ ಎಂದು ಅವರು ವಿವರಿಸಿದ್ದಾರೆ. ಇತ್ತೀಚೆಗೆ, ಮಹಾರಾಷ್ಟ್ರದಲ್ಲಿ ಅದೇ ವಿಚಾರ ಪುನರಾವರ್ತನೆಯಾಗಿದೆ. ರಾಜಕೀಯ ಪಕ್ಷಗಳು ಮತ್ತೆ ನಮ್ಮ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ನಾಶಮಾಡಲು ಯತ್ನಿಸುತ್ತಿವೆ. ಆದ್ದರಿಂದ ಸೂಕ್ತ ನಿರ್ದೇಶನ ನೀಡುವಂತೆ ಅರ್ಜಿ ಕೋರಿದೆ.
ಸಂವಿಧಾನದ ಹತ್ತನೇ ಶೆಡ್ಯೂಲ್ ಅಡಿಯಲ್ಲಿ ಸದನದ ಸದಸ್ಯರು ಅನರ್ಹಗೊಂಡರೆ, ಅವರು ಚುನಾಯಿತರಾದ ಅವಧಿಯಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಲಾಗಿದೆ.
2019 ರಲ್ಲಿ, ಕರ್ನಾಟಕ ದಲ್ಲಿ, ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಅನರ್ಹಗೊಂಡ ಅಥವಾ ರಾಜೀನಾಮೆ ನೀಡಿದ 17 ಶಾಸಕರು ಮರುಚುನಾವಣೆ ಬಯಸಿದ್ದರು. ಅವರಲ್ಲಿ 11 ಮಂದಿ ಮರು ಆಯ್ಕೆಯಾದರು. ಹಾಗೆ ಆಯ್ಕೆಯಾದವರಲ್ಲಿ ಹತ್ತು ಮಂದಿಗೆ ಹಿಂದಿನ ಸರ್ಕಾರದ ಪತನದಿಂದಾಗಿ ರಚನೆಯಾದ ಹೊಸ ಸರ್ಕಾರದಲ್ಲಿ ಮಂತ್ರಿ ಸ್ಥಾನ ದೊರೆಯಿತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇಂತಹ ಜನಸತ್ತಾತ್ಮಕವಲ್ಲದ ಸಂಗತಿಗಳು ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಅಪಹಾಸ್ಯ ಮಾಡುತ್ತಿವೆ ಎಂದು ತಿಳಿಸಿರುವ ಜಯಾ ಠಾಕೂರ್ ಶಾಸಕರನ್ನು ಅವರು ರಾಜೀನಾಮೆಯಿತ್ತ ಅಥವಾ ಅನರ್ಹಗೊಂಡ ದಿನದಿಂದ ಐದು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಿ ಎಂದು ವಿನಂತಿಸಿದ್ದಾರೆ.
(ಕೃಪೆ: ಬಾರ್ & ಬೆಂಚ್)