ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಜುಲೈ 11 ರಂದು ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
370ನೇ ವಿಧಿಯನ್ನು ರದ್ದುಗೊಳಿಸಿದ ನಾಲ್ಕು ವರ್ಷಗಳ ನಂತರ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು 20 ಅರ್ಜಿಗಳ ವಿಚಾರಣೆಯನ್ನು ನಡೆಸಲಿದೆ.
ಮುಖ್ಯನ್ಯಾಯಮೂರ್ತಿ ಡಿ. ಚಂದ್ರಚೂಡ್ ಸೇರಿದಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನು ಒಳಗೊಂಡ 5 ನ್ಯಾಯಮೂರ್ತಿಗಳಿರುವ ಪೀಠ ವಿಚಾರಣೆ ನಡೆಸಲಿದೆ.
2019ರ ಆಗಸ್ಟ್ 6 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ ಲಡಾಖ್, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು.
ಮಾರ್ಚ್ 2020ರಲ್ಲಿ ಸುಪ್ರೀಂಕೋರ್ಟ್‌ನ 5 ನ್ಯಾಯಾಧೀಶರ ಸಂವಿಧಾನಿಕ ಪೀಠವು 370ನೇ ವಿಧಿಯನ್ನು ರದ್ದು ಮಾಡಿದ್ದನ್ನು ಪ್ರಶ್ನಿಸುವ ಅರ್ಜಿಗಳ ಬ್ಯಾಚ್ ಅನ್ನು 7 ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಉಲ್ಲೇಖಿಸುವ ಅಗತ್ಯವಿಲ್ಲ ಎಂದು ಹೇಳಿತ್ತು. ಕೆಲವು ಅರ್ಜಿದಾರರು ಸುಪ್ರೀಂಕೋರ್ಟ್‌ನ ಎರಡು ತೀರ್ಪುಗಳ ನಡುವೆ ಸಂಘರ್ಷವಿದೆ ಎಂದು ವಾದಿಸಿ 7 ನ್ಯಾಯಾಧೀಶರ ಪೀಠಕ್ಕೆ ಪ್ರಕರಣ ವರ್ಗಾಯಿಸಲು ಮನವಿ ಮಾಡಿದ್ದರು. ಆದರೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಐವರು ನ್ಯಾಯಾಧೀಶರ ಪೀಠ ಹಿಂದಿನ ಎರಡು ತೀರ್ಪುಗಳ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಪರಿಗಣಿಸಿ ಪ್ರಕರಣವನ್ನು ದೊಡ್ಡ ಪೀಠಕ್ಕೆ ವರ್ಗಾಯಿಸಲು ನಿರಾಕರಿಸಿತು.