Home ಟಾಪ್ ಸುದ್ದಿಗಳು ಜಾಮೀನು, ಪರೋಲ್‌ ಮೇಲೆ ಕೈದಿಗಳನ್ನು ಬಿಡುಗಡೆಗೊಳಿಸಲು ಸುಪ್ರೀಂ ಕೋರ್ಟ್ ಆದೇಶ!

ಜಾಮೀನು, ಪರೋಲ್‌ ಮೇಲೆ ಕೈದಿಗಳನ್ನು ಬಿಡುಗಡೆಗೊಳಿಸಲು ಸುಪ್ರೀಂ ಕೋರ್ಟ್ ಆದೇಶ!

ಹೊಸದಿಲ್ಲಿ : ದೇಶಾದ್ಯಂತ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಜನತೆ ಕಂಗಾಲಾಗಿದ್ದಾರೆ. ಸೋಂಕು ನಿಯಂತ್ರಿಸಲು ಹಲವು ರಾಜ್ಯಗಳು ಲಾಕ್ ಡೌನ್ ಘೋಷಿಸಿದೆ. ಈ ನಡುವೆ ಜೈಲುಗಳಲ್ಲಿ ಜನದಟ್ಟಣೆ ಕಡಿಮೆ ಮಾಡಲು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ಹೊರಡಿಸಿದ್ದು, ಕೈದಿಗಳನ್ನು ಜಾಮೀನಿನ ಮೇಲೆ ಮತ್ತು ಪರೋಲ್ ಮೇಲೆ ಬಿಡುಗಡೆ ಮಾಡಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸೂಚಿಸಿದೆ.

 ಕಳೆದ ವರ್ಷ ತಜ್ಞರ ಸಮಿತಿ ಶಿಫಾರಸಿನ ಮೇರೆಗೆ ಯಾವ್ಯಾವ ಕೈದಿಗಳನ್ನು ಜಾಮೀನಿನ ಮೇಲೆ ಮತ್ತು ಪರೋಲ್‌ ಮೇಲೆ ಬಿಡುಗಡೆ ಮಾಡಲಾಗಿತ್ತೋ ಅವರನ್ನು ಈಗಲೂ ಬಿಡುಗಡೆ ಮಾಡಬೇಕು. ಯಾವುದೇ ಹೊಸ ಆದೇಶಕ್ಕೆ ಕಾಯದೇ ತಕ್ಷಣವೇ ರಾಜ್ಯ ಸರ್ಕಾರಗಳು ಈ ಕ್ರಮ ಜಾರಿ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸೂಚಿಸಿದೆ.

ದೇಶಾದ್ಯಂತ 4 ಲಕ್ಷ ಕೈದಿಗಳು ಜೈಲಿನಲ್ಲಿದ್ದು, ಇದು ಕೈದಿಗಳು ಮತ್ತು ಪೊಲೀಸ್‌ ಸಿಬ್ಬಂದಿಗಳ ಆರೋಗ್ಯ ಮತ್ತು ಬದುಕುವ ಹಕ್ಕಿನ ಪ್ರಶ್ನೆಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.


Join Whatsapp
Exit mobile version