ಕರ್ನಾಟಕ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಸೇರಿ 9 ಮಂದಿ ನ್ಯಾಯಾಧೀಶರು ಸುಪ್ರೀಂಕೋರ್ಟ್ ಗೆ ಪದೋನ್ನತಿ

Prasthutha|

ನವದೆಹಲಿ: ಇಪ್ಪತ್ತೆರಡು ತಿಂಗಳ ಬಿಕ್ಕಟ್ಟನ್ನು ಕೊನೆಗೊಳಿಸಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ, ಮಂಗಳವಾರ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಸೇರಿದಂತೆ 9 ಮಂದಿ ನ್ಯಾಯಾಧೀಶರನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಲು ಶಿಫಾರಸು ಮಾಡಿದೆ.

- Advertisement -


ಈ ಪಟ್ಟಿಯಲ್ಲಿ ಮೂವರು ಮಹಿಳಾ ನ್ಯಾಯಾಧೀಶರು ಕೂಡ ಇದ್ದಾರೆ. ಹಾಗಾಗಿ ಭಾರತದ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ನೇಮಕಗೊಳ್ಳುವ ಆಶಾವಾದ ಮೂಡಿದೆ.
ಕೊಲಿಜಿಯಂ ಶಿಫಾರಸುಗಳಿಗೆ ಒಪ್ಪಿಗೆ ದೊರೆತರೆ ಕರ್ನಾಟಕ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿರುವ ಬಿ ವಿ ನಾಗರತ್ನ ಅವರು ಭವಿಷ್ಯದಲ್ಲಿ ಸುಪ್ರೀಂಕೋರ್ಟ್ನ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ ವಿ ನಾಗರತ್ನ, ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಮತ್ತು ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಿ ಕೊಲಿಜಿಯಂ ಶಿಫಾರಸು ಮಾಡಿದೆ.

- Advertisement -


ನ್ಯಾಯಮೂರ್ತಿ ಆರ್. ನಾರಿಮನ್ ಅವರು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದ ಕೆಲವೇ ದಿನಗಳಲ್ಲಿ ಈ ಶಿಫಾರಸು ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ತ್ರಿಪುರಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಕಿಲ್ ಕುರೇಶಿ ಅವರನ್ನು ಮೊದಲು ಪಟ್ಟಿಯಲ್ಲಿ ಶಿಫಾರಸು ಮಾಡಲಾಗಿದೆ. ನ್ಯಾಯಮೂರ್ತಿ ಓಕಾ ಅವರೊಂದಿಗೆ ಗುಜರಾತ್ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಿಕ್ಕಿಂ ಹೈಕೋರ್ಟ್ ನ್ಯಾಯಮೂರ್ತಿ ಜೆ ಕೆ ಮಹೇಶ್ವರಿ ಅವರನ್ನು ಕೊಲಿಜಿಯಂ ಶಿಫಾರಸು ಮಾಡಿದೆ.


ಕೇರಳ ಹೈಕೋರ್ಟ್‌ನ ಎರಡನೇ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಸಿ ಟಿ ರವಿಕುಮಾರ್ ಮತ್ತು ಮದ್ರಾಸ್ ಹೈಕೋರ್ಟ್‌ನ ಮೂರನೇ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಂ ಎಂ ಸುಂದರೇಶ್ ಅವರನ್ನು ಕೂಡ ಸುಪ್ರೀಂ ಕೋರ್ಟ್‌ಗೆ ಪದೋನ್ನತಿಗೊಳಿಸಿ ನ್ಯಾಯಾಧೀಶರಾಗಿ ಶಿಫಾರಸು ಮಾಡಲಾಗಿದೆ.

Join Whatsapp
Exit mobile version