ನವದೆಹಲಿ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರವು ಪೆಗಾಸಸ್ ಕುತಂತ್ರಾಂಶದ ಬಗ್ಗೆ ತನಿಖೆ ನಡೆಸಲು ಇಬ್ಬರು ಸದಸ್ಯರ ಆಯೋಗ ರಚಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಬುಧವಾರ ಪಶ್ಚಿಮ ಬಂಗಾಳ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ನೋಟೀಸು ಜಾರಿ ಮಾಡಿದೆ. ಮುಖ್ಯ ನ್ಯಾಯಾಧೀಶ ಎನ್. ವಿ. ರಮಣ ಅವರಿದ್ದ ಪೀಠವು ಈ ಸಂಬಂಧ ನೋಟೀಸು ಜಾರಿ ಮಾಡಿ ಪೆಗಾಸಸ್ ಸಂಬಂಧದ ಇತರ ಅರ್ಜಿಗಳ ವಿಚಾರಣೆಯ ಜೊತೆಗೆ ಸರಕಾರಗಳ ವಾದವನ್ನೂ ಮುಂದಿನ ವಿಚಾರಣೆಯು ಆಗಸ್ಟ್ 25ರಂದು ಆಲಿಸಲಾಗುವುದು ಎಂದು ಹೇಳಿದೆ.
ವಕೀಲ ಸೌರಭ್ ಮಿಶ್ರಾ ಅವರು ಇಂಥ ತನಿಖಾ ಆಯೋಗದ ನ್ಯಾಯವಲಯವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಭಾರತ ಮಟ್ಟದಲ್ಲಷ್ಟೆ ಇದರ ತನಿಖೆ ಸಾಧ್ಯವಿಲ್ಲ ಎಂಬುದು ಅವರ ವಾದ. ಈ ಹಂತದಲ್ಲಿ ತನಿಖಾ ಆಯೋಗಗಳಿಗೆ ತಡೆ ನೀಡಲು ಕೋರ್ಟು ಒಪ್ಪಲಿಲ್ಲ. ಜಸ್ಟೀಸ್ ಸೂರ್ಯಕಾಂತ್ ಅವರು ಆಯೋಗ ಈಗಷ್ಟೆ ಪ್ರಾರಂಭಿಕ ಹಂತದಲ್ಲಷ್ಟೆ ಇದೆ ಎಂದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆಯೋಗ ಕಾನೂನುಬಾಹಿರ ಎಂದರು.
ಜುಲಾಯಿ 26ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಇಸ್ರೇಲ್ ಮೂಲದ ಪೆಗಾಸಸ್ ಕಳ್ಳಗಿವಿ ಬಳಸಿ ಗೂಡಚಾರಿಕೆ ನಡೆಸಿರುವುದರ ಬಗ್ಗೆ ತನಿಖೆಗೆ ಆಯೋಗವೊಂದನ್ನು ನೇಮಿಸುವುದಾಗಿ ಘೋಷಿಸಿದ್ದರು. ಆಯೋಗದಲ್ಲಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಮದನ್ ಬಿ. ಲೋಕೂರ್ ಮತ್ತು ಕೊಲ್ಕತ್ತಾ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ಜ್ಯೋತಿರ್ಮಯಿ ಭಟ್ಟಾಚಾರ್ಯ ಇರುವುದಾಗಿಯೂ ಮಮತಾ ಘೋಷಣೆ ಮಾಡಿದ್ದರು. ಪೆಗಾಸಸ್ ರಾಷ್ಟ್ರೀಯ ರಕ್ಷಣೆಯ ವಿಚಾರ ಆಗಿರುವುದರಿಂದ ರಾಜ್ಯದ ತನಿಖೆಯನ್ನು ಕೇಂದ್ರ ವಿರೋಧಿಸಿದೆ. ಈ ಕಾರಣದಿಂದ ಪಶ್ಚಿಮ ಬಂಗಾಳದ ಆಯೋಗದ ಮುಂದಿನ ಹೆಜ್ಜೆ ಡೋಲಾಯಮಾನವಾಗಿದೆ.