ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತದರ ಅಂಗಸಂಸ್ಥೆಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವ ಕಾಯ್ದೆ (ಯುಎಪಿಎ) ನ್ಯಾಯಮಂಡಳಿಯು ಹೇರಿರುವ ನಿಷೇಧವನ್ನು ತೆರವು ಮಾಡಬೇಕು ಎಂದು ಕೋರಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾ ಮಾಡಿದೆ.
ನ್ಯಾಯಾಧಿಕರಣದ ಆದೇಶದ ವಿರುದ್ಧ ಪಿಎಫ್ ಐ ಮೊದಲು ಹೈಕೋರ್ಟ್ ಮೆಟ್ಟಿಲೇರುವುದು ಸೂಕ್ತ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠ ಹೇಳಿದೆ.
ಪಿಎಫ್ ಐ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ಸಂಸ್ಥೆಯು ಮೊದಲು ಹೈಕೋರ್ಟ್ ಮೊರೆ ಹೋಗಿ ನಂತರ ಸುಪ್ರೀಂ ಕೋರ್ಟ್ ಗೆ ಬರಬೇಕಿತ್ತು ಎಂಬ ನ್ಯಾಯಾಲಯದ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು. ವಕೀಲ ದಿವಾನ್ ಅವರು, ತಮ್ಮ ಕಕ್ಷಿದಾರರು ಹೈಕೋರ್ಟ್ ಗೆ ಹೋಗಬೇಕಿತ್ತು ಎಂಬ ನ್ಯಾಯಾಲಯದ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾಗಿ ಹೇಳಿದರು. ಬಳಿಕ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾ ಮಾಡಿ, ಜೊತೆಗೆ ಹೈಕೋರ್ಟ್ ಗೆ ತೆರಳಲು ಅವಕಾಶವನ್ನೂ ನೀಡಿತು.