Home ಟಾಪ್ ಸುದ್ದಿಗಳು ಮೇವತ್ ನಲ್ಲಿ ಇಸ್ಲಾಂ ಗೆ ಬಲವಂತದ ಮತಾಂತರ ಆರೋಪ | ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಮೇವತ್ ನಲ್ಲಿ ಇಸ್ಲಾಂ ಗೆ ಬಲವಂತದ ಮತಾಂತರ ಆರೋಪ | ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಹರಿಯಾಣ : ಮೇವತ್ ನಲ್ಲಿ ಹಿಂದೂ ಮಹಿಳೆಯರನ್ನ ಅತ್ಯಾಚಾರ ನಡೆಸಿ, ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿದ್ದ ಮನವಿಯನ್ನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ವಜಾಗೊಳಿಸಿದೆ

“ಹಿಂದೂ ಮಹಿಳೆಯರು ಸುರಕ್ಷಿತವಾಗಿಲ್ಲ. ಪರಿಶಿಷ್ಟ ಜಾತಿಯವರ ಮೇಲೆ ಮುಸ್ಲಿಮ್‌ ಸಮುದಾಯದವರು ದೌರ್ಜನ್ಯ ಎಸಗಿದ್ದಾರೆ” ಎಂದು ಅರ್ಜಿಯಲ್ಲಿ  ಆರೋಪಿಸಲಾಗಿತ್ತು.

ಅಲ್ಲದೇ ಪ್ರಕರಣವನ್ನ ಸಿಬಿಐ ಹಾಗೂ ಎನ್ಐಎ ಗೆ ವಹಿಸಿ ಇದರ ನೇತೃತ್ವವನ್ನು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗೆ ವಹಿಸಬೇಕು. ಬಲವಂತದ ಮತಾಂತರ, ಹಿಂದೂ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಹಾಗೂ ಕಾನೂನುಬಾಹಿರವಾಗಿ ಆಸ್ತಿಗಳ ಅತಿಕ್ರಮಣದ ಕುರಿತು ತನಿಖೆಯಾಗಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

ಕಳೆದ ಹತ್ತು ವರ್ಷಗಳಲ್ಲಿ ಬಲಾತ್ಕಾರದಿಂದ ಹಾಗೂ ಪ್ರಭಾವವನ್ನು ಬಳಸುವ ಮೂಲಕ ಮುಸ್ಲಿಮರಿಗೆ ಬರೆದುಕೊಡಲಾಗಿರುವ ಎಲ್ಲಾ ಕ್ರಯ ಪತ್ರಗಳನ್ನು ರದ್ದುಗೊಳಿಸಬೇಕು ಎಂದೂ ಮನವಿ ಮಾಡಲಾಗಿತ್ತು. ಈ ಪ್ರದೇಶದಲ್ಲಿನ ಹಿಂದೂಗಳ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಹಕ್ಕುಗಳನ್ನು “ಪ್ರಬಲ ಸ್ಥಾನದಲ್ಲಿರುವ ಮುಸ್ಲಿಂ ಸಮುದಾಯದ ಸದಸ್ಯರು, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಗಳು ನಾಶ ಮಾಡುತ್ತಿವೆ” ಎಂದು ಮನವಿಯಲ್ಲಿ ಹೇಳಲಾಗಿತ್ತು.

ಆದರೆ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾ.ಮೂ. ಎ ಎಸ್‌ ಬೋಪಣ್ಣ ಮತ್ತು ಹೃಷಿಕೇಶ್‌ ರಾಯ್‌ ಅವರಿದ್ದ ತ್ರಿಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.

ಸಾಕಷ್ಟು ಸಂಖ್ಯೆಯಲ್ಲಿ ಹಿಂದೂಗಳನ್ನು ಬಲವಂತದಿಂದ ಮತಾಂತರಗೊಳಿಸಲಾಗಿದೆ. ಮೇವತ್‌ ಎಂದು ಕರೆಯಲಾಗುತ್ತಿದ್ದ ನೂಹ್‌ ಜಿಲ್ಲೆಯಲ್ಲಿ ಹಿಂದೂ ಮಹಿಳೆಯರು ಮತ್ತು ಅಪ್ರಾಪ್ತೆಯರನ್ನು ಅಪಹರಿಸಿ, ಅವರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ವಕೀಲ ವಿಷ್ಣು ಶಂಕರ್‌ ಜೈನ್‌ ಮೂಲಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

Join Whatsapp
Exit mobile version