Home ಟಾಪ್ ಸುದ್ದಿಗಳು ಟಿವಿ ಮಾಧ್ಯಮಗಳ ಪ್ರಚೋದನಕಾರಿ ಕಾರ್ಯಕ್ರಮಗಳಿಗೆ ಕಡಿವಾಣ ಹಾಕದ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಟಿವಿ ಮಾಧ್ಯಮಗಳ ಪ್ರಚೋದನಕಾರಿ ಕಾರ್ಯಕ್ರಮಗಳಿಗೆ ಕಡಿವಾಣ ಹಾಕದ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ : ಗಣರಾಜ್ಯೋತ್ಸವ ದಿನ ರೈತರ ಪ್ರತಿಭಟನೆ ವೇಳೆ ಟಿವಿಗಳಲ್ಲಿ ಪ್ರಸಾರವಾದ ಪ್ರಚೋದನಕಾರಿ ಕಾರ್ಯಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಪ್ರಚೋದನಕಾರಿ ಕಾರ್ಯಕ್ರಮಗಳ ತಡೆಗೆ ಯಾವುದೇ ಕ್ರಮ ಜರುಗಿಸದ ಧೋರಣೆಗಾಗಿ ಕೇಂದ್ರ ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ಜ.26ರಂದು ದೆಹಲಿಯಲ್ಲಿ ಕೆಲವೆಡೆ ಇಂಟರ್ನೆಟ್ ಸಂಪರ್ಕಕ್ಕೆ ನಿರ್ಬಂಧ ಹೇರಿದ್ದೂ ರ್ಯಾಲಿ ಹಿಂಸೆಗೆ ತಿರುಗಲು ಕಾರಣವಾಯಿತು ಎಂಬ ಅಂಶವನ್ನು ಉಲ್ಲೇಖಿಸಿದ ಕೋರ್ಟ್, ನ್ಯಾಯಯುತ ಹಾಗೂ ಫಲಪ್ರದವಾದ ಸುದ್ದಿ ಪ್ರಸಾರ ಈ ಹೊತ್ತಿನ ಅಗತ್ಯ. ಆದರೆ ಪ್ರಚೋದನೆಯ ಉದ್ದೇಶವನ್ನು ಹೊಂದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ಅಭಿಪ್ರಾಯ ಪಟ್ಟಿತು.

ವಾಸ್ತವವಾದ ಪರಿಸ್ಥಿತಿ ಏನೆಂದರೆ ಕೆಲವೊಂದು ಕಾರ್ಯಕ್ರಮಗಳು ಪ್ರಚೋದನಕಾರಿ ಆಗಿರುತ್ತವೆ. ಸರಕಾರ ಈ ಕುರಿತು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ಪೀಠ ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿತು.

ಕೋವಿಡ್ 19 ಆರಂಭದ ದಿನಗಳಲ್ಲಿ ತಬ್ಲೀಗ್ ಜಮಾತ್ ಕುರಿತ ವರದಿಗೆ ಸಂಬಂಧಿಸಿದ ಕೆಲವ ಅರ್ಜಿಗಳ ವಿಚಾರಣೆಯ ವೇಳೆಗೆ ಕೊರ್ಟ್ ಈ ನಿಲುವನ್ನು ವ್ಯಕ್ತಪಡಿಸಿತು.

ನ್ಯಾಯಯುತ ಮತ್ತು ಫಲಪ್ರದವಾದ ವರದಿಗಾರಿಕೆ ಸಮಸ್ಯೆಯೇ ಅಲ್ಲ. ಆದರೆ, ಅನ್ಯರನ್ನು ಪ್ರಚೋದಿಸುವ ಉದ್ದೇಶವಿದ್ದಾಗ ಸಮಸ್ಯೆ ಆಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣ ದೃಷ್ಟಿಯಿಂದ ಕಡಿವಾಣ ಕ್ರಮವೂ ಅಗತ್ಯ ಎಂದು ಪೀಠ ಹೇಳಿದೆ.

ಟಿ.ವಿಯಲ್ಲಿ ಏನೆಲ್ಲಾ ಹೇಳುತ್ತಾರೆ ಎಂಬುದರ ಬಗ್ಗೆ ನಮಗೆ ಸಂಬಂಧವಿಲ್ಲ. ತನಿಖೆಯ ಪರಿಣಾಮವನ್ನು ಒಳಗೊಂಡ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಈ ಮಾತು ಹೇಳಲಾಗುತ್ತಿದೆ ಎಂದು ಪೀಠ ಸ್ಪಷ್ಟಪಡಿಸಿತು.

Join Whatsapp
Exit mobile version