ನವದೆಹಲಿ: ಜನತಾ ದಳ (ಯುನೈಟೆಡ್) ನಾಗಾಲ್ಯಾಂಡಿನ ತನ್ನ ರಾಜ್ಯ ಸಮಿತಿಯನ್ನು ವಿಸರ್ಜಿಸಿದೆ.
ನಾಗಾಲ್ಯಾಂಡಿನ ಜೆಡಿಯು ಅಧ್ಯಕ್ಷ ಸಂಚುಮೋ ಲೋತಾ ಅವರು ಪಕ್ಷವನ್ನು ಕೇಳದೆಯೇ ಮುಖ್ಯಮಂತ್ರಿ ನೆಯಿಪು ರಿಯೋರಿಗೆ ಬೆಂಬಲ ಸೂಚಿಸಿದ್ದರಿಂದ ಜೆಡಿಯು ದೇಶೀಯ ಸಮಿತಿಯು ರಾಜ್ಯ ಜೆಡಿಯು ಘಟಕವನ್ನು ವಿಸರ್ಜಿಸಿದೆ.
ಇದು ಅಶಿಸ್ತು ಮತ್ತು ನಿಯಮಬಾಹಿರ. ಆದ್ದರಿಂದ ಕೂಡಲೆ ರಾಜ್ಯ ಜೆಡಿಯು ಘಟಕವನ್ನು ವಿಸರ್ಜಿಸಲಾಗಿದೆ ಎಂದು ಕೇಂದ್ರ ಘಟಕ ಹೇಳಿದೆ.
ನಾಗಾಲ್ಯಾಂಡಿನಲ್ಲಿ ಮಿತ್ರ ಪಕ್ಷಗಳು 60 ಬಲದ ವಿಧಾನ ಸಭೆಯಲ್ಲಿ 37 ಸ್ಥಾನಗಳನ್ನು ಗೆದ್ದು ಎನ್’ಡಿಪಿಪಿ- ಬಿಜೆಪಿ ಮೈತ್ರಿ ಕೂಟದ ಸರಕಾರ ಮೊನ್ನೆ ರಚನೆಯಾಗಿದೆ. ಎನ್’ಡಿಪಿಪಿ- ರಾಷ್ಟ್ರೀಯ ಪ್ರಜಾಸತ್ತಾತ್ಮಕ ಪ್ರಗತಿಪರ ಪಕ್ಷವು 25 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 12ರಲ್ಲಿ ವಿಜಯಿಯಾಗಿತ್ತು.
ನಾಗಾಲ್ಯಾಂಡಿನಲ್ಲಿ ನೆಯಿಪು ರಿಯು ಅಜಾತಶತ್ರುವಾಗಿದ್ದು, ಸತತ ಐದನೆಯ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ನಾಗಾಲ್ಯಾಂಡಿನಲ್ಲಿ ಎನ್ ಸಿಪಿ, ಎನ್ ಪಿಪಿ, ಎನ್ ಪಿಎಫ್, ಆರ್’ಪಿಐ(ಎ), ಎಲ್’ಜೆಪಿ (ಆರ್ ವಿ), ಜೆಡಿ(ಯು) ತಲಾ ಒಂದೊಂದು ಸ್ಥಾನ ಗೆದ್ದಿದ್ದರೆ, ನಾಲ್ವರು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದರು. ಜೆಡಿಯುನಿಂದ ಜ್ವೆಂಗಾ ಸೇಬ್ ಗೆದ್ದಿದ್ದು ಅವರು ಆಳುವ ಕೂಟಕ್ಕೆ ಬೆಂಬಲ ಸೂಚಿಸಿದ್ದಾರೆ.