ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಸಲ್ಲಿಸಿದ ದೂರಿನನ್ವಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ. ಸುಧಾಕರ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಸಂಬಂಧ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ಸುಧಾಕರ್’ಗೆ ಸಮನ್ಸ್ ಜಾರಿಗೊಳಿಸಿದೆ.
ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸುಧಾಕರ್ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆಂಜನೇಯ ರೆಡ್ಡಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ರೈತರಿಗೆ ಕಳ್ಳಭಟ್ಟಿ ನೀಡಿ ಜೈಲುಪಾಲಾಗಿದ್ದ ವ್ಯಕ್ತಿಯೊಬ್ಬ ನನ್ನ ವಿರುದ್ಧ ಹೋರಾಡುತ್ತಿದ್ದಾನೆ ಎಂದು ಶಾಸಕ ಸುಧಾಕರ್ ಅವರು ಆರೋಪಿಸಿದ್ದರು. ಈ ಹೇಳಿಕೆ ವಿರುದ್ಧದ ಆಕ್ರೋಶ ವ್ಯಕ್ತಪಡಿಸಿದ್ದ ಆಂಜನೇಯ ರೆಡ್ಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಇದು ನನ್ನ ತೇಜೋವಧೆ ಎಂದು ದೂರಿದ್ದರು.
ಆಂಜನೇಯ ರೆಡ್ಡಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಕ್ರಿಮಿನಲ್ ಕೇಸ್ ಎಂದು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಇದರನ್ವಯ ಸುಧಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಇದೀಗ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.