ಇಂದು ತಮ್ಮ ಮುಂದಿನ ನಡೆ ಬಗ್ಗೆ ತಿಳಿಸಲಿರುವ ಸುಮಲತಾ ಅಂಬರೀಶ್

Prasthutha|

ಮಂಡ್ಯ: ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದ ಸಂಸದೆ ಸುಮಲತಾ ಅಂಬರೀಷ್ ಇಂದು ಬೆಳಿಗ್ಗೆ ಮಂಡ್ಯದಲ್ಲಿ ತನ್ನ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

- Advertisement -

ನಿನ್ನೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸುಮಲತಾ, ಬುಧವಾರ ಬೆಳಿಗ್ಗೆ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಂಡ್ಯ ಜನರ ಸಮ್ಮುಖದಲ್ಲಿ ನನ್ನ ಅಭಿಪ್ರಾಯ ಪ್ರಕಟಿಸುತ್ತೇನೆ ಎಂದು ಹೇಳಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ಸುಮಲತಾ ಅಂಬರೀಶ್, ಈ ಬಾರಿ ಕಮಲ ಚಿಹ್ನೆ ಅಡಿಯಲ್ಲಿಯೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಬಿಜೆಪಿಯ ಟಿಕೆಟ್​ಗಾಗಿ ಹೈಕಮಾಂಡ್ ಮಟ್ಟದಲ್ಲಿಯೂ ಸುಮಲತಾ ಅಂಬರೀಶ್ ಲಾಬಿ ಸಹ ಮಾಡಿದ್ದರು. ನೇರವಾಗಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.

- Advertisement -

ಆದರೆ ಬಿಜೆಪಿ- ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದಾಗಿ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ಕ್ಷಣದಿಂದ ಸುಮಲತಾ ಸ್ಥಿತಿ ಅತಂತ್ರವಾಗಿದೆ. ಬಿಜೆಪಿ ಪರ ನಿಲುವು ತಳೆದಿದ್ದರಿಂದ ಕಾಂಗ್ರೆಸ್ ಬಾಗಿಲನ್ನು ಮುಚ್ಚಿಕೊಂಡಿತ್ತು.

ಮಂಡ್ಯ ಬಿಟ್ಟು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಿದ್ದರೂ ಒಪ್ಪದ ಸುಮಲತಾ, ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದರು. ಇದೀಗ ಅವರು ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕಿಳಿಯುತ್ತಾರಾ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.



Join Whatsapp