ಇಂದೋರ್: ಕುಖ್ಯಾತ ‘ಸುಲ್ಲಿ ಡೀಲ್ಸ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರು ಭಾನುವಾರ ಇಂದೋರ್ ನಲ್ಲಿ ಬಂಧಿಸಿದ್ದಾರೆ.
ಸುಲ್ಲಿ ಡೀಲ್ಸ್ ಆ್ಯಪ್ ಪ್ರಕರಣದಲ್ಲಿ ಇದು ಮೊದಲ ಬಂಧನ ಎಂದು ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಹಿಳೆಯರ ವಿರುದ್ಧ ಅವಹೇಳನಕಾರಿ ಸುಲ್ಲಿ ಡೀಲ್ಸ್ ಮೊಬೈಲ್ ಆ್ಯಪ್ ಕಳೆದ ವರ್ಷದ ಜುಲೈನಲ್ಲಿ ಕಾಣಿಸಿಕೊಂಡು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ಆ್ಯಪ್ ನಲ್ಲಿ ಮುಸ್ಲಿಮ್ ಮಹಿಳೆಯರ ಫೋಟೋಗಳನ್ನು ಅವರ ಒಪ್ಪಿಗೆ ಇಲ್ಲದೆ ಅಪ್ಲೋಡ್ ಮಾಡಿಕೊಂಡು ಹರಾಜು ಹಾಕಲು ಪ್ರದರ್ಶಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಔಮ್ಕಾರೇಶ್ವರ್ ಠಾಕೂರ್ ಎಂಬಾತನನ್ನು ಇಂದೋರ್ ಪೊಲೀಸರು ಬಂಧಿಸಿದ್ದು, ಈತ ಐಪಿಎಸ್ ಅಕಾಡೆಮಿಯಲ್ಲಿ ಬಿಸಿಎ ಅಧ್ಯಯನ ನಡೆಸುತ್ತಿದ್ದ ಎಂದು ಹೇಳಲಾಗಿದೆ.
ಬುಲ್ಲಿ ಬಾಯಿ ಪ್ರಕರಣದ ಮಾಸ್ಟರ್ ಮೈಂಡ್ ಅಸ್ಸಾಂ ನ ನೀರಜ್ ಬಿಷ್ಣೋಯ್ ಎಂಬಾತ ಈ ಹಿಂದೆ ಬಂಧಿತನಾಗಿದ್ದು, ಸುಲ್ಲಿ ಡೀಲ್ಸ್ ನ ಪ್ರಮುಖ ಆರೋಪಿಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ವರದಿಗಳು ಸೂಚಿಸಿವೆ.