ಸ್ಥಗಿತಗೊಂಡ ದೈತ್ಯ ಹಡಗಿನ ಬಿಡುಗಡೆಗೆ 6700 ಕೋಟಿ ರೂಪಾಯಿಗಳ ನಷ್ಟ ಪರಿಹಾರ ಮೊತ್ತಕ್ಕೆ ಬೇಡಿಕೆ ಸಲ್ಲಿಸಿದ ಸುಯೆಝ್ ಕಾಲುವೆ ಪ್ರಾಧಿಕಾರ !

Prasthutha|

ವಾರಗಳ ಹಿಂದೆ ಸೂಯೆಝ್ ಕಾಲುವೆಯಲ್ಲಿ ಸ್ಥಗಿತಗೊಂಡಿದ್ದ ದೈತ್ಯ ಸರಕು ಹಡಗು ಎವರ್ ಗಿವೆನ್ ಅನ್ನು ಈಜಿಪ್ಟ್ ವಶಪಡಿಸಿಕೊಂಡಿದೆ. ಎವರ್‌ಗಿವೆನ್ ಎಂಬ ಈ ಸರಕು ಹಡಗನ್ನು 900 ಮಿಲಿಯನ್ ಯುಎಸ್ ಡಾಲರ್ (ಸುಮಾರು 6700 ಕೋಟಿ ರೂಪಾಯಿ) ಪರಿಹಾರ ಮೊತ್ತವನ್ನು ಪಾವತಿಸದ ಕಾರಣ ಈಜಿಫ್ಟ್ ನ ಸೂಯೆಝ್ ಕಾಲುವೆ ಪ್ರಾಧಿಕಾರವು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.

- Advertisement -

ಹಡಗನ್ನು ಸರಿಸಲು ನಡೆಸಿದ ರಕ್ಷಣಾ ಕಾರ್ಯಾಚರಣೆಯ ವೆಚ್ಚ ಮತ್ತು ಕಾಲುವೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿ ಸಂಭವಿಸಿದ ನಷ್ಟಗಳು ಸೇರಿದಂತೆ ಕಾಲುವೆ ಪ್ರಾಧಿಕಾರವು 900 ಮಿಲಿಯನ್ ಯುಎಸ್ ಡಾಲರ್ ಪರಿಹಾರ ಮೊತ್ತವನ್ನು ಕೇಳಿತ್ತು. ಆದರೆ, ಹಡಗಿನ ಮಾಲೀಕರು ಈವರೆಗೆ ಹಣ ಪಾವತಿಸದಿರುವುದರಿಂದ ಹಡಗನ್ನು ಅಧಿಕೃತವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಕಾಲುವೆ ಪ್ರಾಧಿಕಾರದ ಮುಖ್ಯಸ್ಥ ಒಸಾಮಾ ರಾಬಿ ತಿಳಿಸಿದ್ದಾರೆ. ಇಸ್ಮಾಯಿಲಿಯಾದ ನ್ಯಾಯಾಲಯವು ಹಡಗನ್ನು ವಶಪಡಿಸಿಕೊಳ್ಳಲು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಡಗಿನ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. 

ಈ ಮಧ್ಯೆ ಪರಿಹಾರದ ಮೊತ್ತದ ಬಗ್ಗೆ ಕಾಲುವೆ ಪ್ರಾಧಿಕಾರ, ಹಡಗು ಮಾಲೀಕರು ಮತ್ತು ವಿಮಾ ಕಂಪನಿ ನಡುವೆ ಇನ್ನೂ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಜಪಾನಿನ ಒಡೆತನದ ಈ ಎವರ್ ಗಿವೆನ್ ಹಡಗನ್ನು ತೈವಾನೀಸ್ ಕಂಪನಿಯೊಂದು ನಿರ್ವಹಿಸುತ್ತಿದೆ. ಪ್ರಸ್ತುತ ಎವರ್ ಗಿವೆನ್ ಈಜಿಫ್ಟ್ ನ ಗ್ರೇಟ್ ಬಿಟರ್ ಸರೋವರದಲ್ಲಿ ಲಂಗರು ಹಾಕಿದೆ. ಮಾರ್ಚ್ 23 ರಂದು ದೈತ್ಯ ಸರಕು ಹಡಗು ಎವರ್ ಗಿವೆನ್ ಸೂಯೆಝ್ ಕಾಲುವೆಯಲ್ಲಿ ಸ್ಥಗಿತಗೊಂಡಿತ್ತು. ಇದರಿಂದಾಗಿ ಸೂಯೆಝ್ ಕಾಲುವೆಯ ಸಂಚಾರಕ್ಕೆ ಸಂಪೂರ್ಣ ಅಡ್ಡಿಯುಂಟಾಗಿತ್ತು. ಹಡಗು ಸ್ಥಗಿತಗೊಂಡಿದ್ದರಿಂದ ವ್ಯಾಪಾರ ಕ್ಷೇತ್ರದಲ್ಲಿ ಕೋಟ್ಯಾಂತರ ನಷ್ಟ ಸಂಭವಿಸಿತ್ತು.

Join Whatsapp