ನವದೆಹಲಿ: ಏರ್ ಇಂಡಿಯಾದ ಬಂಡವಾಳ ಹಿಂಪಡೆಯುವ ಪ್ರಕ್ರಿಯೆ ಬಗ್ಗೆ ಆಕ್ಷೇಪಿಸಿ ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾ. ಜ್ಯೋತಿ ಸಿಂಗ್ ಅವರಿದ್ದ ಪೀಠ ಅರ್ಜಿ ವಜಾಗೊಳಿಸಿದೆ.
ಏರ್ ಇಂಡಿಯಾದ ಬಂಡವಾಳ ಹಿಂಪಡೆಯುವ ಪ್ರಕ್ರಿಯೆ ರದ್ದುಪಡಿಸಬೇಕು ಜೊತೆಗೆ ಈ ಉದ್ದೇಶಕ್ಕಾಗಿ ನೀಡಿರುವ ಯಾವುದೇ ಬಗೆಯ ಅನುಮತಿಯನ್ನು ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸ್ವಾಮಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಕಳೆದ ವರ್ಷ ಅಕ್ಟೋಬರ್ ನಲ್ಲಿ, ಸರ್ಕಾರಿ ಕಂಪೆನಿ ಎಐಎಸ್ ಎಟಿಎಸ್ ನ ಅರ್ಧದಷ್ಟು ಪಾಲಿನೊಂದಿಗೆ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಶೇ 100ರಷ್ಟು ಈಕ್ವಿಟಿ ಷೇರು ಪಡೆಯುವುದಕ್ಕಾಗಿ ಟಾಟಾ ಸನ್ಸ್ ಮಾಡಿದ ಅತ್ಯಧಿಕ ಬಿಡ್ ಅನ್ನು ಕೇಂದ್ರ ಅಂಗೀಕರಿಸಿತ್ತು.
ಅದೇ ತಿಂಗಳು, 18,000 ಕೋಟಿಗೆ ಏರ್ ಇಂಡಿಯಾ ಮಾರಾಟ ಮಾಡಲೆಂದು ಸರ್ಕಾರ ಟಾಟಾದೊಂದಿಗೆ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಟಾಟಾ 2,700 ಕೋಟಿ ನಗದು ಪಾವತಿಸುವುದರೊಂದಿಗೆ ಏರ್ ಇಂಡಿಯಾ ಹೊಂದಿರುವ ರೂ. 13,500 ಕೋಟಿ ಸಾಲವನ್ನು ತಾನು ಹೊರಲಿದೆ. ಕಳೆದು ಎರಡು ದಶಕಗಳಲ್ಲಿ ಏರ್ ಇಂಡಿಯಾ ಬಗೆಯ ಬಂಡವಾಳ ಹಿಂತೆಗೆತ ಪ್ರಕ್ರಿಯೆ ನಡೆದಿರುವುದು ಇದೇ ಮೊದಲು.
ವಿಚಾರಣೆ ವೇಳೆ ಖುದ್ದು ವಾದ ಮಂಡಿಸಿದ ಸುಬ್ರಮಣಿಯನ್ ಸ್ವಾಮಿ “ಹರಾಜು ಪ್ರಕ್ರಿಯೆ ಅಸಾಂವಿಧಾನಿಕ, ದುರುದ್ದೇಶಪೂರ್ವಕ, ಭ್ರಷ್ಟತೆಯಿಂದ ಕೂಡಿದ್ದು ಟಾಟಾ ಪರವಾಗಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ” ಎಂದು ವಾದಿಸಿದ್ದರು.
ಆದರೆ ಸ್ವಾಮಿ ಅವರ ವಾದವನ್ನು ಪುರಸ್ಕರಿಸದ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿದೆ.