ಭೋಪಾಲ್: ಪಾಠ ಕಲಿಸಿದ ಗುರುವಿಗೆ ಜೀವನಪರ್ಯಂತ ಕೃತಜ್ಞರಾಗಿರಬೇಕು. ಆದರೆ ಮಧ್ಯ ಪ್ರದೇಶದ ಇಬ್ಬರು ವಿದ್ಯಾರ್ಥಿಗಳು ಪಾಠ ಕಲಿಸಿದ ಗುರುವಿಗೇ ಗುಂಡು ಹಾರಿಸಿ ಕೊಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ಸುದ್ದಿ ಎಲ್ಲೆಡೆ ಹರಿದಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಜೌರಾ ರಸ್ತೆಯಲ್ಲಿ ಗಿರ್ವಾರ್ ಸಿಂಗ್ ಹೆಸರಿನ ಶಿಕ್ಷಕ ಟ್ಯೂಷನ್ ತರಗತಿಗಳನ್ನು ಮಾಡುತ್ತಾನೆ. ಮೂರು ವರ್ಷಗಳ ಹಿಂದೆ ಅವರ ಬಳಿ ಟ್ಯೂಷನ್ ತೆಗೆದುಕೊಂಡು ದ್ವಿತೀಯ ಪಿಯು ಪರೀಕ್ಷೆ ಬರೆದು ಪಾಸಾಗಿದ್ದ ಇಬ್ಬರು ಯುವಕರು ಗಿರ್ವಾರ್ ಸಿಂಗ್‌ಗೆ ಟ್ಯೂಷನ್ ಹಣ ಕೊಡುವುದು ಬಾಕಿ ಇತ್ತಂತೆ. ಈ ವಿಚಾರದಲ್ಲಿ ಗಿರ್ವಾರ್ ಹಲವು ಬಾರಿ ಯುವಕರನ್ನು ಕೇಳಿದ್ದರಂತೆ.
ಬುಧವಾರದಂದು ಆ ಯುವಕರು ಟ್ಯೂಷನ್ ಸೆಂಟರ್ ಬಳಿ ಬಂದಿದ್ದಾರೆ. ಸ್ಕೂಟರ್‌ನಲ್ಲಿ ಬಂದಿದ್ದ ಅವರಿಬ್ಬರು, ಸ್ಕೂಟರ್‌ನಿಂದ ಕೆಳಗಿಳಿಯದೆ ಗಿರ್ವಾರ್ ಅವರನ್ನೇ ಹೊರಗೆ ಕರೆದಿದ್ದಾರೆ. ಮೊದಲಿಗೆ “ಚೆನ್ನಾಗಿದ್ದೀರಾ? ಹೇಗಿದೆ ಜೀವನ?” ಎಂದು ಮಾಮೂಲಿಯಾಗಿ ಮಾತನಾಡಿದ್ದಾರೆ. ಹಾಗೆ ಮಾತನಾಡಿಸುತ್ತಲೇ ಜೇಬಿನಿಂದ ಪಿಸ್ತೂಲನ್ನು ತೆಗೆದು ಗಿರ್ವಾರ್‌ನ ಹೊಟ್ಟೆಗೆ ಗುಂಡು ಹಾರಿಸಿದ್ದಾರೆ.
ಗುಂಡು ಹಾರಿಸಿದ ತಕ್ಷಣ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳೀಯರು ಗಿರ್ವಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಗ್ವಾಲಿಯರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.