ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ| ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ: ಶಶಿಕಲಾ ಜೊಲ್ಲೆ

Prasthutha|

ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಮಾಡಿರುವುದು ಖಂಡನೀಯವಾಗಿದ್ದು, ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

- Advertisement -


ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ರೀತಿಯ ದುಷ್ಕೃತ್ಯ ನಡೆದಿರುವುದು ನೋವಿನ ಸಂಗತಿ. ನಾನು ಒಬ್ಬ ಮಹಿಳೆಯಾಗಿ ಸರ್ಕಾರದಲ್ಲಿ ಮಹಿಳಾ ಸಚಿವೆಯಾಗಿ ಒಂದು ಹೆಣ್ಣಿನ ನೋವು ಒಬ್ಬಳು ಹೆಣ್ಣಾಗಿ ನನಗೆ ಅರ್ಥ ಆಗುತ್ತದೆ. ನಾಗರಿಕ ಸಮಾಜದಲ್ಲಿ ಈ ರೀತಿಯ ದುಷ್ಕೃತ್ಯವನ್ನು ಯಾರೂ ಸಹಿಸುವುದಿಲ್ಲ. ಇದನ್ನು ಸಾಮೂಹಿಕವಾಗಿ ಖಂಡಿಸಬೇಕು.


ಈ ಪ್ರಕರಣದ ಆರೋಪಿಗಳ ಪತ್ತೆಗೆ ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಣಗಣಿಸಿದ್ದಾರೆ. ಗೃಹ ಸಚಿವರೂ ಆರೋಪಿಗಳ ಪತ್ತೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ರಚನೆ ಮಾಡಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್. ಟಿ. ಸೋಮಶೇಖರ್ ಅವರೂ ಇಲ್ಲಿಯೇ ಇದ್ದು ಸಂತ್ರಸ್ಥ ಯುವತಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದು, ಆರೋಪಿಗಳ ಪತ್ತೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಾನೂ ಕೂಡ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Join Whatsapp