ಕಾಸರಗೋಡು: ಹೋಟೆಲ್‌ನಿಂದ ಆನ್’ಲೈನ್ ಮೂಲಕ ತರಿಸಿದ್ದ ‘ಕುಝಿಮಂದಿ’ (ಕೋಳಿ ಮಾಂಸದಿಂದ ತಯಾರಿಸಲಾದ ಬಿರಿಯಾನಿ) ಸೇವಿಸಿ, ಅಸ್ವಸ್ಥಗೊಂಡಿದ್ದ 20 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ಅಂಜುಶ್ರೀ ಪಾರ್ವತಿ ಮೃತಪಟ್ಟವರು. ಇವರು ಕಾಸರಗೋಡು ಜಿಲ್ಲೆಯ ಪೆರುಂಬಳ ಬೇನೂರಿನ ದಿ. ಕುಮಾರನ್- ಅಂಬಿಕಾ ದಂಪತಿಯ ಪುತ್ರಿಯಾಗಿದ್ದಾರೆ.
ಅಡ್ಕತ್ತಬೈಲಿನ ಅಲ್ ರೊಮಾನ್ಸಿಯಾ ಎಂಬ ಹೆಸರಿನ ಹೋಟೆಲ್‌ನಿಂದ ಜ.1ರಂದು ಆನ್’ಲೈನ್ ಮೂಲಕ ‘ಕುಝಿಮಂದಿ’ ಖಾದ್ಯವನ್ನು ಅಂಜುಶ್ರೀ ತರಿಸಿದ್ದರು. ಅದನ್ನು ಸೇವಿಸಿದ ನಂತರ ಅಸ್ವಸ್ಥಗೊಂಡ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.
ಪೊಲೀಸರು ಹೋಟೆಲ್ ಮಾಲೀಕ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತನಿಖೆಗೆ ಆದೇಶಿಸಿದ್ದು, ಹೋಟೆಲ್ ಪರವಾನಗಿ ರದ್ದು ಮಾಡುವಂತೆಯೂ ಆದೇಶ ನೀಡಿದ್ದಾರೆ.