ಉತ್ತರ ಪ್ರದೇಶ: ಪ್ರೀತಿಸಿದವಳನ್ನು ಮದುವೆಯಾಗಲು ಯುವತಿಯೋರ್ವಳು ತನ್ನ ಲಿಂಗವನ್ನೇ ಬದಲಾಯಿಸಿಕೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಫಾಫಮೌ ನಿವಾಸಿಯಾಗಿರುವ 20 ವರ್ಷದ ಬಿಎ ಕಲಿಯುತ್ತಿರುವ ವಿದ್ಯಾರ್ಥಿನಿ ಇನ್ನೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದಾಳೆ. ಇವರಿಬ್ಬರೂ ಪರಸ್ಪರ ಬಿಟ್ಟಿರಲಾರದಷ್ಟು ಆಪ್ತರಾಗಿದ್ದಾರೆ. ಈ ಕಾರಣಕ್ಕಾಗಿ ಸಮಾಜದ ನಿಲುವು, ಅನುಮೋದನೆಗಾಗಿ ಕಾಯದೆ ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದಾರೆ.
ಆದರೆ ಇದು ಇಬ್ಬರ ಮನೆಯವರಿಗೂ ಒಪ್ಪಿಗೆಯಾಗಲಿಲ್ಲ. ಮಾತ್ರವಲ್ಲ, ತಮ್ಮ ಮಕ್ಕಳು ಈ ರೀತಿ ಮದುವೆಯಾದರೆ ಸಮಾಜದಿಂದ ತಾವು ಎದುರಿಸಬೇಕಾಗಿರುವ ಕೀಳುದೃಷ್ಟಿಯನ್ನು ಅವರಿಗೆ ಸಹಿಸಲು ಆಗಲಿಲ್ಲ. ಆದ್ದರಿಂದ ಇಬ್ಬರನ್ನೂ ಬೇರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅದು ಫಲ ನೀಡಲಿಲ್ಲ.
ಮಾತ್ರವಲ್ಲ, ವಿದ್ಯಾರ್ಥಿನಿ ಮೋತಿ ಲಾಲ್ ನೆಹರು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡಾ.ಮೋಹಿತ್ ಜೈನ್ ಅವರನ್ನು ಭೇಟಿ ಮಾಡಿ ತನ್ನ ಲಿಂಗವನ್ನು ಬದಲಾಯಿಸುವ ಬಯಕೆ ವ್ಯಕ್ತಪಡಿಸಿದ್ದಾಳೆ. ತಾನು ವಯಸ್ಕಳಾಗಿದ್ದು, ತನ್ನ ಇಚ್ಛೆಯಂತೆ ಬದುಕುವ ಆಸೆ ಹೊಂದಿರುವುದಾಗಿ ತಿಳಿಸಿದ್ದಾಳೆ.
ಮೊದಲಿಗೆ ನಾವು ವಿದ್ಯಾರ್ಥಿನಿಯನ್ನು ಮನೋವೈದ್ಯರ ಬಳಿಗೆ ಕಳುಹಿಸಿ ಕೌನ್ಸಿಲಿಂಗ್ ಮಾಡಿಸಿದೆವು. ಆಕೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತಳಾಗಿದ್ದಾಳೆ ಎಂದು ತಿಳಿಯಿತು. ವಯಸ್ಕಳಾದ ಕಾರಣ ವಿದ್ಯಾರ್ಥಿನಿಯಿಂದ ಪ್ರಮಾಣ ಪತ್ರ ಪಡೆದು ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸಿದೆವು ಎಂದು ವೈದ್ಯರು ಹೇಳಿದ್ದಾರೆ.
ಪ್ಲಾಸ್ಟಿಕ್ ಸರ್ಜನ್ ಡಾ ಮೋಹಿತ್ ಜೈನ್ ಮತ್ತು ಸ್ತ್ರೀರೋಗ ತಜ್ಞ ಡಾ ಅಮೃತ್ ಚೌರಾಸಿಯಾ ನೇತೃತ್ವದ ವೈದ್ಯರ ತಂಡವು ಹುಡುಗಿಯ ಲಿಂಗವನ್ನು ಬದಲಾಯಿಸುವ ಸವಾಲನ್ನು ತೆಗೆದುಕೊಂಡಿತು.
ನಾಲ್ಕು ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ಯುವತಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೇಹದಲ್ಲಿದ್ದ ಸ್ತನಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗಿದೆ. ಇತ್ತೀಚೆಗೆ ಮಹಿಳಾ ಮತ್ತು ಪ್ರಸೂತಿ ವಿಭಾಗದಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಆಕೆಯ ಗರ್ಭಕೋಶವನ್ನೂ ತೆಗೆಯಲಾಗಿದೆಯಂತೆ. ಕೆಲವು ತಿಂಗಳ ನಂತರ ಆಕೆಗೆ ಅಂತಿಮ ಶಸ್ತ್ರಚಿಕಿತ್ಸೆ ಮಾಡಲಾಗುವುದು, ಇದರಲ್ಲಿ ಆಕೆಯ ದೇಹದ ಲೈಂಗಿಕ ಭಾಗವೂ ಬದಲಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.
ಹುಡುಗಿ ಪುರುಷನಾಗುವ ಪ್ರಕ್ರಿಯೆಯಲ್ಲಿ ದೈಹಿಕ ಬದಲಾವಣೆಗಳು ಮಾತ್ರವಲ್ಲ, ಹಾವಭಾವವೂ ಬದಲಾಗಲಿದೆ. ಗಡ್ಡ, ಮೀಸೆಯೂ ಬೆಳೆಯುತ್ತದೆ. ಇದಕ್ಕಾಗಿ ಅವರಿಗೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಚಿಕಿತ್ಸೆ ನೀಡಲಾಗುವುದು. ಹೀಗೆ ಆಕೆಯೊಳಗೆ ಪುರುಷತ್ವ ಜಾಗೃತಗೊಂಡು ಅವಳಲ್ಲಿ ಸಂಪೂರ್ಣ ಬದಲಾವಣೆ ಬರಲು ಶುರುವಾಗುತ್ತದೆ. ಪ್ರಸ್ತುತ ಪ್ರಕ್ರಿಯೆ ನಡೆಯುತ್ತಿದೆ. ಒಂದೂವರೆ ವರ್ಷಗಳ ನಂತರ ಆಕೆ ಸಂಪೂರ್ಣವಾಗಿ ಪುರುಷಳಾಗುತ್ತಾಳೆ ಎಂದು ವೈದ್ಯರ ತಂಡ ವಿವರಿಸಿದೆ.