Home ಕ್ರೀಡೆ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ದುಬಾರಿ ಓವರ್‌ ಎಸೆದ ಸ್ಟುವರ್ಟ್ ಬ್ರಾಡ್

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ದುಬಾರಿ ಓವರ್‌ ಎಸೆದ ಸ್ಟುವರ್ಟ್ ಬ್ರಾಡ್

ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವೇಗದ ಬೌಲರ್‌ ಸ್ಟುವರ್ಟ್‌ ಬ್ರಾಡ್‌, ದುಬಾರಿ ಓವರ್‌ ಎಸೆಯುವ ಮೂಲಕ ಕೆಟ್ಟ ದಾಖಲೆ ನಿರ್ಮಿಸಿದ್ದಾರೆ.

ನಿರ್ಣಾಯಕ ಟೆಸ್ಟ್‌ ಪಂದ್ಯದ ಎರಡನೇ ದಿನ, ಇನ್ನಿಂಗ್ಸ್‌ನ 84ನೇ ಓವರ್‌ ಎಸೆದ ಬ್ರಾಡ್‌, ಬರೋಬ್ಬರಿ 35 ರನ್‌ ಬಿಟ್ಟುಕೊಟ್ಟರು. ಇದು ಟೆಸ್ಟ್‌ ಕ್ರಿಕೆಟ್‌ನ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ ದಾಖಲಾದ ಅತಿಹೆಚ್ಚಿನ ಮೊತ್ತ. ಬ್ರಾಡ್‌ ಬೌಲಿಂಗ್‌ ವೇಳೆ ಸ್ಟ್ರೈಕ್‌ನಲ್ಲಿದ್ದ ಭಾರತದ ನಾಯಕ ಜಸ್‌ಪ್ರೀತ್‌ ಬುಮ್ರಾ, ಎರಡು ಸಿಕ್ಸರ್‌ ಮತ್ತು ನಾಲ್ಕು ಬೌಂಡರಿಗಳನ್ನು ಚಚ್ಚುವ ಮೂಲಕ 29 ರನ್ ಗಳಿಸಿದರು. ಇತರ ರೂಪದಲ್ಲಿ ಬ್ರಾಡ್‌ ಆರು ರನ್‌ ನೀಡಿದರು.

ಭಾರತೀಯ ಬ್ಯಾಟ್ಸ್‌ಮನ್‌ಗಳಿಂದ ಬ್ರಾಡ್‌ ಹೀನಾಯವಾಗಿ ದಂಡಿಸಿಕೊಳ್ಳುತ್ತಿರುವುದು ಇದು ಮೊದಲೇನಲ್ಲ. 2007ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಯುವರಾಜ್‌ ಸಿಂಗ್‌,  ಸ್ಟುವರ್ಟ್‌ ಬ್ರಾಡ್‌ ಎಸೆದ ಓವರ್‌ನ ಆರೂ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು.

ಟೆಸ್ಟ್‌ ಕ್ರಿಕೆಟ್‌ನ ಟಾಪ್‌ 5 ದುಬಾರಿ ಓವರ್‌ಗಳ ಇತಿಹಾಸ

2003 ಮತ್ತು 2013ರಲ್ಲಿ ಕ್ರಮವಾಗಿ ರಾಬಿನ್‌ ಪೀಟರ್‌ಸನ್‌ ಮತ್ತು ಜೇಮ್ಸ್‌ ಆಂಡರ್ಸನ್‌ 28 ರನ್‌ ನೀಡಿದ್ದು ಈವರೆಗಿನ ದಾಖಲೆಯಾಗಿತ್ತು. 2003ರ ಡಿಸೆಂಬರ್‌ನಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ, ವೆಸ್ಟ್‌ ಇಂಡೀಸ್‌ನ ದಿಗ್ಗಜ ಆಟಗಾರ ಬ್ರಯಾನ್‌ ಲಾರಾ ದಕ್ಷಿಣ ಆಫ್ರಿಕದ ಬೌಲರ್‌ ರಾಬಿನ್‌ ಪೀಟರ್‌ಸನ್‌ ಎಸೆದ ಓವರ್‌ನಲ್ಲಿ 28 ರನ್‌ ಸಿಡಿಸಿದ್ದರು.

2013ರಲ್ಲಿ ಪರ್ತ್‌ನಲ್ಲಿ ಜೇಮ್ಸ್‌ ಆಂಡರ್ಸನ್‌ ಬೌಲಿಂಗ್‌ನಲ್ಲಿ ಆಸೀಸ್‌ ಬ್ಯಾಟ್ಸ್‌ಮನ್‌ ಜಾರ್ಜ್‌ ಬೈಲಿ ಸಹ 28 ರನ್‌ ದಾಖಲಿಸಿದ್ದರು. 2020ರಲ್ಲಿ ಪೋರ್ಟ್‌ ಎಲಿಝಬೆತ್‌ನಲ್ಲಿ ನಡೆದ ಪಂದ್ಯದಲ್ಲಿ ಜೋ ರೂಟ್‌ ಓವರ್‌ನಲ್ಲಿ ಆಫ್ರಿಕದ ಕೇಶವ್‌ ಮಹಾರಾಜ್‌ 28 ರನ್‌ ಸಿಡಿಸಿದ್ದರು. 2006 ಲಾಹೋರ್‌ ಟೆಸ್ಟ್‌ನಲ್ಲಿ ಶಾಹಿದ್‌ ಅಫ್ರೀದಿ, ಹರ್ಭಜನ್‌ ಸಿಂಗ್‌ ಎಸೆದ ಓವರ್‌ನಲ್ಲಿ 27 ರನ್‌ ಗಳಿಸಿದ್ದರು.

Join Whatsapp
Exit mobile version