ಪುಣೆ: ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಕೊನೆಗೊಳಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಅವರು ಕರೆ ನೀಡಿರುವುದಾಗಿ ಬಾರ್ & ಬೆಂಚ್ ವರದಿ ತಿಳಿಸಿದೆ.
ಮಾರ್ಚ್ 3ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್‌ವಾಡ್ ನಲ್ಲಿ ಹೊಸ ನ್ಯಾಯಾಲಯದ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದ ಪೀಠಿಕೆಯಲ್ಲಿನ ‘ಜಾತ್ಯತೀತ’ ಮತ್ತು ‘ಪ್ರಜಾಪ್ರಭುತ್ವ’ ಎಂಬ ಪದಗಳು ನನಗೆ ಬಹಳ ಮುಖ್ಯ ಎಂದಿದ್ದಾರೆ.
ಭಾರತದ ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಜಾತ್ಯತೀತತೆಯನ್ನು ಉತ್ತೇಜಿಸಬೇಕು ಎಂದಿರುವ ನ್ಯಾಯಮೂರ್ತಿ, ನ್ಯಾಯಾಲಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸಂವಿಧಾನದ ಪೀಠಿಕೆಯ ಪ್ರತಿಗೆ ತಲೆಬಾಗುವ ಮೂಲಕ ಪ್ರಾರಂಭಿಸಬಹುದು ಎಂದು ಸಲಹೆ ನೀಡಿದ್ದಾರೆ.