Home ಟಾಪ್ ಸುದ್ದಿಗಳು ಅರಾಜಕತೆ ಸೃಷ್ಟಿಸುವ ಬುಲ್ಡೋಜರ್ ಸಂಸ್ಕೃತಿ ನಿಲ್ಲಿಸಿ: ಎಸ್‌’ಡಿಪಿಐ

ಅರಾಜಕತೆ ಸೃಷ್ಟಿಸುವ ಬುಲ್ಡೋಜರ್ ಸಂಸ್ಕೃತಿ ನಿಲ್ಲಿಸಿ: ಎಸ್‌’ಡಿಪಿಐ

ನವದೆಹಲಿ : ಉತ್ತರಾಖಂಡದ ಹಲ್ದ್ವಾನಿಯಲ್ಲಿ ಮದರಸಾ ಮತ್ತು ಮಸೀದಿ ಧ್ವಂಸ ಕೃತ್ಯವು ತಮ್ಮ ದೊರೆಗಳನ್ನು ಮೆಚ್ಚಿಸಲು ಅಧಿಕಾರಿ ವರ್ಗದ ಅತಿರೇಕದ ನಡವಳಿಕೆಯ ಫಲಿತಾಂಶ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟನೆ ಹೊರಡಿಸಿರುವ ಎಸ್‌ಡಿಪಿಐ ರಾಷ್ಟ್ರ ಉಪಾಧ್ಯಕ್ಷ ಮೊಹಮ್ಮದ್ ಶಫಿ, ದೇಶವನ್ನು ಆಳುತ್ತಿರುವ ಹಿಂದುತ್ವ ಫ್ಯಾಸಿಸ್ಟ್‌ಗಳು ಮುಸ್ಲಿಮರ ಆಸ್ತಿಗಳನ್ನು ಬುಲ್ಡೋಜ್ ಮಾಡುವುದು ಸಾಮಾನ್ಯವಾಗಿದೆ. ಸರ್ಕಾರದ ಸಂಪೂರ್ಣ ಬೆಂಬಲದೊಂದಿಗೆ ಅಧಿಕಾರಶಾಹಿ ವರ್ಗ ನಡೆಸುತ್ತಿರುವ ಈ ದೌರ್ಜನ್ಯಕ್ಕೆ ತುತ್ತಾಗುತ್ತಿರುವ ನಾಗರಿಕರಿಗೆ ಯಾವುದೇ ರಕ್ಷಣೆ ಸಿಗುತ್ತಿಲ್ಲ. ಇಂತಹ ಘಟನೆಗಳು ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯಲಿದೆ ಎಂದು ಎಚ್ಚರಿಸಿದ್ದಾರೆ.

ಹಲ್ದ್ವಾನಿಯಲ್ಲಿ ನಡೆದ ಘಟನೆಯು ಕೇವಲ ‘ಅಕ್ರಮ ಕಟ್ಟಡ’ವನ್ನು ತೆರವುಗೊಳಿಸುವ ಕಾರ್ಯವಲ್ಲ ಎಂದಿರುವ ಅವರು, ದಶಕಗಳಿಂದ ಅಲ್ಲಿ ವಾಸಿಸುತ್ತಿರುವ 4000 ಕ್ಕೂ ಹೆಚ್ಚು ಕುಟುಂಬಗಳನ್ನು ಅವರ ಭೂಮಿಯಿಂದ ಹೊರಹಾಕುವ ಕಾರ್ಯವಾಗಿದೆ. ಈ ಕಾರ್ಯಾಚರಣೆ ಸಂದರ್ಭ ದೌರ್ಜನ್ಯಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ಮುಸ್ಲಿಮರು. ಜನರನ್ನು ಹೊರಹಾಕಲು ಇವರು ಕಟ್ಟಿದ ಕತೆಯಲ್ಲಿ ಸ್ಪಷ್ಟತೆ ಮತ್ತು ವಾಸ್ತವ ಅಂಶಗಳು ಇಲ್ಲ ಎಂದಿದ್ದಾರೆ.
2007ರಲ್ಲಿ ರೈಲ್ವೇ ಇಲಾಖೆ ಹೈಕೋರ್ಟ್‌ನಲ್ಲಿ ನೀಡಿದ ಹೇಳಿಕೆ ಪ್ರಕಾರ, ಅವರ 29 ಎಕರೆ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಮತ್ತು ಈ 29 ಎಕರೆಗಳಲ್ಲಿ 10 ಎಕರೆಯನ್ನು ವಾಪಸ್ ಪಡೆಯಲಾಗಿದೆ. 2016 ರಲ್ಲಿ ಅವರು ಹೇಳುವ ಪ್ರಕಾರ ಅದೇ ರೈಲ್ವೆ 78 ಎಕರೆ ಭೂಮಿಯಲ್ಲಿ ಪಿಲ್ಲರ್‌ಗಳನ್ನು ಗುರುತಾಗಿ ಸ್ಥಾಪಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಸರ್ಕಾರಿ ವಾದ ಮಂಡಿಸಿ ಆ ಭೂಮಿ ರಾಜ್ಯ ಸರ್ಕಾರ ಮತ್ತು ಖಾಸಗಿ ವ್ಯಕ್ತಿಗಳಿಗೆ ಸೇರಿದ್ದು, ರೈಲ್ವೆಯು ಇಲಾಖೆಗೂ ಈ ಭೂಮಿಗೂ ಸಂಬಂಧ ಇಲ್ಲ ಎಂದು ಹೇಳಿತ್ತು. ಬಳಿಕ ಒಂದು ಸಮುದಾಯದ ಮೇಲಿನ‌ದ್ವೇಷದಿಂದಾಗಿ ಸರ್ಕಾರದ ನಿಲುವು ಬದಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅಧಿಕಾರಿಗಳ ಕಾನೂನುಬಾಹಿರ ಕಾರ್ಯಾಚರಣೆಯ ಕಾರಣಕ್ಕೆ ಈಗಾಗಲೇ 5 ಅಮೂಲ್ಯ ಜೀವಗಳು ಬಲಿಯಾಗಿವೆ. 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ನ್ಯಾಯದ ನಿರಾಕರಣೆ ಸಂತ್ರಸ್ತರಿಂದ ತೀವ್ರ ಪ್ರತಿಕ್ರಿಯೆಗೆ ಕಾರಣವಾಗುತ್ತದೆ. ಇದು ದೇಶದಲ್ಲಿ ಅರಾಜಕತೆಯಲ್ಲಿ ಸೃಷ್ಟಿಸುತ್ತದೆ. ಜನಾಂಗೀಯ ದ್ವೇಷ ಮತ್ತು ಸೇಡಿನ ಕೃತ್ಯಗಳಿಂದ ಉಂಟಾಗುವ ಅರಾಜಕತೆಯಿಂದ ದೇಶವನ್ನು ರಕ್ಷಿಸಲು, ಸರ್ಕಾರ ಮತ್ತು ಅದರ ಆಡಳಿತ ಯಂತ್ರವು ಧರ್ಮದ ಆಧಾರದ ಮೇಲೆ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸುವ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ಎಸ್‌ಡಿಪಿಐ ಪಕ್ಷವು ಒತ್ತಾಯಿಸುತ್ತದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version