ಮಂಡ್ಯ: ಕರ್ನಾಟಕದ ‘ನಂದಿನಿ’ ಹಾಗೂ ಗುಜರಾತ್ ನ ‘ಅಮುಲ್’ ಜಂಟಿಯಾಗಿ ಕಾರ್ಯ ನಿರ್ವಹಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ತಾಲೂಕಿನ ಗೆಜ್ಜಲಗೆರೆ ಜಿಲ್ಲಾ ಹಾಲು ಒಕ್ಕೂಟದ (ಮನ್ ಮುಲ್) ಆವರಣದಲ್ಲಿ ನಿರ್ಮಿಸಿರುವ ಮೆಗಾ ಡೇರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗುಜರಾತ್ ನಲ್ಲಿ ಸಹಕಾರ ಒಕ್ಕೂಟವು ಪ್ರಗತಿಯ ಹಾದಿಯಲ್ಲಿದೆ. ಹಾಗೆಯೇ 1975ರಿಂದಲೂ ಕರ್ನಾಟಕ ಹಾಲು ಮಹಾಮಂಡಳಿ ಕೂಡ ಅಭಿವೃದ್ಧಿ ಹೊಂದುತ್ತಿದೆ. ಕೆಎಂಎಫ್ ಗೆ ಅಮುಲ್ ನಿಂದ ಎಲ್ಲಾ ತಾಂತ್ರಿಕ ಬೆಂಬಲ ಮತ್ತು ಸಹಕಾರ ಸಿಗಲಿದೆ . ಕರ್ನಾಟಕ ಮತ್ತು ಗುಜರಾತ್ ಈ ದಿಕ್ಕಿನಲ್ಲಿ ಒಗ್ಗೂಡಿದರೆ, ಅದು ದೇಶಾದ್ಯಂತದ ರೈತರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು.
‘ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಪ್ರಾಥಮಿಕ ಡೇರಿಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪನೆ ಮಾಡಲಾಗುವುದು. ಆ ಮೂಲಕ ಹಾಲಿನ ಉತ್ಪನ್ನಗಳನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡುವ ಗುರಿ ಹೊಂದಲಾಗಿದೆ’ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಶಾಸಕರಾದ ಡಿ.ಸಿ.ತಮ್ಮಣ್ಣ, ಪುಟ್ಟರಾಜು, ಸುರೇಶ್ ಗೌಡ, ಅನ್ನದಾನಿ, ವಿಧಾನ ಪರಿಷತ್ ಸದಸ್ಯ ಮಧು ಜಿ ಮಾದೇಗೌಡ, ಮನಮುಲ್ ಅಧ್ಯಕ್ಷ ರಾಮಚಂದ್ರು ಉಪಸ್ಥಿತರಿದ್ದರು.