Home ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಡ್ರಗ್ ಮುಕ್ತವನ್ನಾಗಿಸಲು ಕ್ರಮ : ಡಿಸಿ ಮುಲ್ಲೈ ಮುಗಿಲನ್

ದಕ್ಷಿಣ ಕನ್ನಡ ಜಿಲ್ಲೆಯನ್ನು ಡ್ರಗ್ ಮುಕ್ತವನ್ನಾಗಿಸಲು ಕ್ರಮ : ಡಿಸಿ ಮುಲ್ಲೈ ಮುಗಿಲನ್

ಮಂಗಳೂರು: ಗಾಂಜಾ, ಅಫೀಮು ಸೇರಿದಂತೆ ವಿವಿಧ ಮಾದರಿಯ ಡ್ರಗ್ಸ್ ವ್ಯಸನಿಗಳನ್ನು ಪತ್ತೆ ಹಚ್ಚಿ, ಅವರನ್ನು ವ್ಯಸನ ಮುಕ್ತರನ್ನಾಗಿಸುವುದರೊಂದಿಗೆ, ದಕ್ಷಿಣ ಕನ್ನಡ ಜಿಲ್ಲೆಯನ್ನು ಡ್ರಗ್ ಮುಕ್ತವನ್ನಾಗಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜು. 4ರ ಮಂಗಳವಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

ನಾರ್ಕೋ ಕೋ ಆರ್ಡಿನೇಶನ್ ಸೆಂಟರ್ ನ (NCORD) ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಮಾತನಾಡಿ, ಡ್ರಗ್ ವ್ಯಸನಿಗಳನ್ನು ಮೊದಲು ಪತ್ತೆ ಹಚ್ಚಬೇಕು, ಅದಕ್ಕಾಗಿ ಜಿಲ್ಲೆಯ ಕಾಲೇಜುಗಳನ್ನೊಳಗೊಂಡಂತೆ ವಿದ್ಯಾಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಪರಿಣಾಮಕಾರಿಯಾಗಿ ರೂಪಿಸಬೇಕು ಅದಕ್ಕಾಗಿ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಬೇಕು, ಮೊದಲು ಅವರಿಗೆ ತರಬೇತಿ ನೀಡಬೇಕು, ಈ ಕಾರ್ಯದಲ್ಲಿ ಆಸಕ್ತರಿರುವ ಸರ್ಕಾರೇತರ ಸ್ವಯಂ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ, ಆ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಡ್ರಗ್ ನ ವಿವಿಧ ಮಾದರಿಗಳು, ಅವುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಣ್ಣ ಸಣ್ಣ ವಿಡಿಯೋ ತುಣುಕುಗಳು ಹಾಗೂ ಜಿಂಗಲ್ಸ್ ಗಳನ್ನು ನಿರ್ಮಿಸುವ ಮೂಲಕ ಜಾಗೃತಿ ಮೂಡಿಸಬೇಕು, ವಿವಿಧ ಸಾಮಾಜಿಕ ಮಾಧ್ಯಮಗಳು ನೆರವಿಗೆ ಬರಲಿವೆ ಎಂದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಯುವ ಪರಿವರ್ತಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳ ಮೂಲಕ ಜಿಲ್ಲೆಯ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಈ ಮಾಹಿತಿಯನ್ನು ತಲುಪಿಸಬಹುದಾಗಿದೆ ಎಂದವರು ತಿಳಿಸಿದರು.

ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಣ್ಣ ಸಣ್ಣ ವಿಡಿಯೋಗಳಿಗೆ ಕಂಟೆಂಟ್ ಸಿದ್ದಪಡಿಸಲು ಆರೋಗ್ಯ, ಮಾನಸಿಕ ಆರೋಗ್ಯ ಹಾಗೂ ಶಿಕ್ಷಣ ಇಲಾಖೆಗಳು ನೆರವು ನೀಡಬೇಕು ಎಂದು ಅವರು ತಿಳಿಸಿದ್ದಾರೆ.  

ಬೆಳ್ತಂಗಡಿ ತಾಲೂಕಿನ ನೆರಿಯ ಬಳಿ ಖಾಸಗಿಯವರು ಗಾಂಜಾ ಬೆಳೆಯುತ್ತಾರೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಾಗ ಅರಣ್ಯ, ಪೊಲೀಸ್ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸಭೆ ನಡೆಸಿ ಗಾಂಜಾ ಬೆಳೆಸಿದವರನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಶಿಕ್ಷೆ ವಿಧಿಸಲು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.

ಖಾಸಗಿ ಕೋರಿಯರ್ ಹಾಗೂ ಪಾರ್ಸೆಲ್ ಸರ್ವಿಸ್ ಗಳ ಮೂಲಕ ಡ್ರಗ್ಸ್ ಗಳ ಸಾಗಾಣಿಕೆ ಮೇಲೆ ಹದ್ದಿನ ಕಣ್ಣಿಡಬೇಕು, ಡ್ರಗ್ಸ್  ಪತ್ತೆಹಚ್ಚಲು ಹೊಸ ತಂತ್ರಗಳನ್ನು ಬಳಸುವ ಅಗತ್ಯವಿದೆ, ತರಬೇತಿ ಪಡೆದ ಶ್ವಾನಗಳನ್ನು ಬಳಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಸಭೆಗೆ ತಿಳಿಸಿದರು.

ನಾರ್ಕೋ ಕೋ ಆರ್ಡಿನೇಷನ್ ಸೆಂಟರ್ ನ ಜಿಲ್ಲಾ ಮಟ್ಟದ ಸಮಿತಿಯ ಸದಸ್ಯ ಸಂಚಾಲಕರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಅವರು ಮಾತನಾಡಿ, ಮಾದಕ ವಸ್ತುಗಳು ಆಂಧ್ರಪ್ರದೇಶದಿಂದ ಕೇರಳ ಮಾರ್ಗವಾಗಿ ವಾಯು ಹಾಗೂ ಸಮುದ್ರ ಮಾರ್ಗವಾಗಿ ಸಾಗಾಟವಾಗುವ ಸಾಧ್ಯತೆಗಳಿದ್ದು ಸಂಬಂಧಿತ ಇಲಾಖೆಗಳು ಹೆಚ್ಚಿನ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಅಬಕಾರಿ ಇಲಾಖೆಯ ಉಪಆಯುಕ್ತರಾದ ಬಿಂದುಶ್ರೀ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ ಅನ್ಶು ಕುಮಾರ್, ಭಾರತೀಯ ನೌಕಾಪಡೆಯ ಅಧಿಕಾರಿ ಪ್ರಿಯಾ, ಡಿಡಿಪಿಯು ವೆಂಕಟೇಶ್ ಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಏರ್ ಪೋಟ್೯ನ ಡೆಪ್ಯುಟಿ ಮ್ಯಾನೇಜರ್ ಥಾಮಸ್ ವರ್ಗೀಸ್ ಭಾಗವಹಿಸಿದ್ದರು.

Join Whatsapp
Exit mobile version