ಕೋಲಾರ: ಇಲ್ಲಿನ ಮುಳಬಾಗಿಲುನಲ್ಲಿ ಏಸುಕ್ರಿಸ್ತರ ಪ್ರತಿಮೆ ಹಾಗೂ ಪ್ರಾರ್ಥನಾ ಕೊಠಡಿಯನ್ನು ಜಿಲ್ಲಾಡಳಿತ ಜೆಸಿಬಿ ಮೂಲಕ ಕೆಡವಿಹಾಕಿರುವ ಘಟನೆ ನಡೆದಿದೆ.
ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ ಹಿನ್ನೆಲೆಯಲ್ಲಿ ಇದನ್ನು ಕೆಡವಲಾಗಿದೆ ಎಂದು ಜಿಲ್ಲಾಡಳಿತ ಸಮಜಾಯಿಷಿ ನೀಡಿದೆ. ಆದರೆ ಕ್ರೈಸ್ತ ಸಂಘಟನೆಗಳು, ಈ ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಜಿಲ್ಲಾಡಳಿತ ಏಕಾಏಕಿ ಜೆಸಿಬಿ ತಂದು ಏಸುಕ್ರಿಸ್ತರ ಪ್ರತಿಮೆ ಕೆಡವುವ ಮೂಲಕ ಕ್ರೈಸ್ತ ಬಾಂಧವರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿವೆ.
ಮುಳಬಾಗಿಲು ತಾಲೂಕಿನ ಗೊಲ್ಲಹಳ್ಳಿ ಗ್ರಾಮ ಪಂಚಾಯತ್ ಗೂಕುಂಟೆ ಗ್ರಾಮದಲ್ಲಿ ಸುಮಾರು 25 ವರ್ಷಗಳ ಹಿಂದಿನ ಏಸು ಕ್ರಿಸ್ತರ ಪ್ರತಿಮೆಯನ್ನು ತಾಲೂಕು ಆಡಳಿತ ಸುಮಾರು 200 ಪೊಲೀಸ್ ಪಡೆಗಳ ಸಹಾಯದಿಂದ ತೆರವುಗೊಳಿಸಿದೆ ಎಂದು ಮುಳಬಾಗಿಲು ತಹಶೀಲ್ದಾರ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಕಾನೂನು ಉಲ್ಲಂಘಿಸಿ ಚರ್ಚ್ ಧ್ವಂಸಗೊಳಿಸಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಕ್ರೈಸ್ತ ಸಂಘಟನೆಗಳ ಮುಖಂಡ ಸ್ಟ್ಯಾನಿ ಪಿಂಟೋ ತಿಳಿಸಿದ್ದಾರೆ.