Home ಟಾಪ್ ಸುದ್ದಿಗಳು ಸಮಾನ ನಾಗರಿಕ ಸಂಹಿತೆ ಜಾರಿಗೆ ರಾಜ್ಯಗಳು ಸ್ವತಂತ್ರ: ಕಿರಣ್ ರಿಜಿಜು

ಸಮಾನ ನಾಗರಿಕ ಸಂಹಿತೆ ಜಾರಿಗೆ ರಾಜ್ಯಗಳು ಸ್ವತಂತ್ರ: ಕಿರಣ್ ರಿಜಿಜು

ನವದೆಹಲಿ: ಸಮಾನ ನಾಗರಿಕ ಸಂಹಿತೆ- ಯುಸಿಸಿಯನ್ನು ಸದನದಲ್ಲಿ ಪಾಸು ಮಾಡಿಕೊಳ್ಳಲು ರಾಜ್ಯ ಸರಕಾರಗಳು ಸ್ವತಂತ್ರರಿದ್ದಾರೆ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ತಿಳಿಸಿದೆ.

ಸಿಪಿಎಂ ಪಕ್ಷದ ರಾಜ್ಯ ಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಪ್ರಶ್ನೆಗೆ ಸರಕಾರದ ಪರ ಉತ್ತರ ನೀಡಿದ ಕಾನೂನು ಸಚಿವ ಕಿರಣ್ ರಿಜಿಜು, ಸಮಾನ ನಾಗರಿಕ ಸಂಹಿತೆ ವಿಷಯವಾಗಿ ಕೆಲವು ರಾಜ್ಯ ಸರಕಾರಗಳು  ತಮ್ಮದೇ ದಾರಿಯಲ್ಲಿ ಮುನ್ನಡೆದಿವೆ. ರಾಜ್ಯಗಳ ಈ ಕಾರ್ಯಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಮನವರಿಕೆ ಇದೆ ಎಂದೂ ರಿಜಿಜು ತಿಳಿಸಿದರು.

“ಸಂವಿಧಾನದ 4ನೇ ವಿಧಿಯು ದೇಶದ ಎಲ್ಲ ರಾಜ್ಯಗಳು ತಮ್ಮ ನಾಗರಿಕರ ರಕ್ಷಣೆಗೆ ಒಗ್ಗುವಂತೆ ಸಮಾನ ನಾಗರಿಕ ಸಂಹಿತೆ ಅಳವಡಿಸಿಕೊಳ್ಳಲವಕಾಶವಿದೆ. ವೈಯಕ್ತಿಕ ಕಾನೂನಿನಡಿ ಬರುವ ಕರುಳು ಸಂಬಂಧ ಮತ್ತು ವಾರಸುದಾರಿಕೆ ವಿಲ್, ಕೂಡು ಕುಟುಂಬ ಮತ್ತು ಪಾಲುದಾರಿಕೆ, ಮದುವೆ ಮತ್ತು ಬಿಡುಗಡೆ ಇವು ಐದು ಏಳನೆಯ ಪರಿಚ್ಛೇದದಲ್ಲಿನ ಏಕತ್ರ ಪಟ್ಟಿಯಾಗಿವೆ. ಆದರೆ ರಾಜ್ಯ ಸರಕಾರಗಳು ಇವುಗಳ ಬಗೆಗೂ ತಮ್ಮದೇ ಕಾನೂನು ಮಾಡಿಕೊಳ್ಳಲು ಸ್ವತಂತ್ರವಿವೆ” ಎಂದೂ ಕಿರಣ್ ತಿಳಿಸಿದರು.

ಸಮಾನ ನಾಗರಿಕ ಸಂಹಿತೆ ಹೇಗೆ ಜಾರಿ ಮಾಡಬೇಕು ಎನ್ನುವುದರ ಬಗ್ಗೆ ಸೂತ್ರ ರೂಪಿಸಲು ಸಮಿತಿಯೊಂದನ್ನು ರಚಿಸಿದ ಮೊದಲ ರಾಜ್ಯ ಬಿಜೆಪಿ ಆಡಳಿತದ ಉತ್ತರಾಖಂಡ. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ರಂಜನಾ ದೇಸಾಯಿ ಅಧ್ಯಕ್ಷತೆಯ ಐವರು ಸದಸ್ಯರಿರುವ ಸಮಿತಿ ಇದಾಗಿದೆ.

ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿಯು ಸಮಾನ ನಾಗರಿಕ ಸಂಹಿತೆಯನ್ನು ತನ್ನ ಚುನಾವಣಾ ಆಶ್ವಾಸನೆಯಾಗಿ ಹೇಳಿತ್ತು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಪ್ರತಿಜ್ಞೆ ಮಾಡಿದ್ದರು. ಅದು ಕೂಡ ಗುಜರಾತಿನಲ್ಲಿ ಬಿಜೆಪಿಯ ಭಾರೀ ಗೆಲುವಿಗೆ ದಾರಿ ಮಾಡಿರಬಹುದು ಎಂಬುದೊಂದು ಲೆಕ್ಕಾಚಾರ. ಎರಡನೆಯ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆಯಾದಾಗಲೂ ಅವರು ಸಮಾನ ನಾಗರಿಕ ಸಂಹಿತೆ ಜಾರಿಯ ಬಗೆಗಿನ ತನ್ನ ಬದ್ಧತೆಯನ್ನು ಒತ್ತಿ ಹೇಳಿದರು. 2024ರ ಲೋಕ ಸಭಾ ಚುನಾವಣೆಯನ್ನು ಬಿಜೆಪಿಯು ಸಮಾನ ನಾಗರಿಕ ಸಂಹಿತೆಯ ಜಾರಿಯ ಮೇಲೆ ಎದುರಿಸಿ ಗೆಲ್ಲಲಿದೆ ಎಂದೂ ಪಟೇಲರು ಹೇಳಿದರು.

ಕಳೆದ ವಾರ ರಾಜ್ಯ ಸಭೆಯಲ್ಲಿ ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಅವರು ಈ ಬಗ್ಗೆ ಒಂದು ಖಾಸಗಿ ಮಸೂದೆಯನ್ನು ಮಂಡಿಸಿ ಮುನ್ನುಡಿ ಬರೆದಿದ್ದಾರೆ. ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದಾಗ ಬಿಜೆಪಿಯ ರಾಜ್ಯ ಸಭಾ ನಾಯಕ ಪಿಯೂಷ್ ಗೋಯೆಲ್ ಅವರು ಸದರಿ ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡರು.

Join Whatsapp
Exit mobile version